ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ, ಹಿರಿಯ ಸಹಕಾರಿ ಧುರೀಣ ನಿರಂಜನ್ ಬಾವಂತಬೆಟ್ಟು ಅವರಿಗೆ ಫೆ.28ರಂದು ತಣ್ಣೀರುಪಂತ ಬಾವಂತಬೆಟ್ಟು ಶ್ರೀ ಆದಿನಾಥ ಸ್ವಾಮಿ ಜಿನಮಂದಿರದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಮಾತನಾಡಿ, ನಿರಂಜನ ಬಾವಂತಬೆಟ್ಟು ಎಲ್ಲ ಜಾತಿಗಳನ್ನು ಸಮಾನವಾಗಿ ನೋಡುತ್ತಿದ್ದರು. ಗ್ರಾಮದ ಎಲ್ಲ ಸಮುದಾಯದ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಸಮಾಜದಲ್ಲಿ ಬಹಳ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಯಾರಿಗೂ ಹುಟ್ಟುವ ಜಾತಿ ಮುಖ್ಯವಲ್ಲ, ನೀತಿ ಮುಖ್ಯ ಎಂದು ಜೈನ ಧರ್ಮ ಹೇಳುತ್ತದೆ. ಯಾರು ಉತ್ತಮ ದಾನ-ಧರ್ಮ ಮಾಡುತ್ತಾರೋ, ಯಾರಲ್ಲಿ ಒಳ್ಳೆಯ ಗುಣಗಳು ಇರುತ್ತವೆಯೋ, ಅವರು ದೇವರಿಗೆ ಸಮಾನ ಎಂದು ಹೇಳಿದರು. ಬಳಿಕ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂಬತ್ತು ಬಾರಿ ನಮೋಕಾರ ಮಂತ್ರ ಪಠಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ನಿರ್ದೇಶಕರಾದ ರವಿರಾಜ್ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ ಕಾಪು, ಪದ್ಮನಾಭ ಶೆಟ್ಟಿ ಅರ್ಕಜೆ, ಸುಧಾಕರ್ ರೈ, ಸವಿತಾ ಎನ್. ಶೆಟ್ಟಿ, ಸುಭದ್ರಾ ರಾವ್, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸೀತಾರಾಮ ರೈ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಜೈನರ ಆಳ್ವಿಕೆಯ ಹೆಚ್ಚಿನ ಬಸದಿಯ ಮೊಕ್ತೇಸರರು ಭಾಗವಹಿಸಿದ್ದರು.ಉಪನ್ಯಾಸಕಿ ವಂದನಾ ಜೈನ್ ನಿರಂಜನ ಬಾವಂತಬೆಟ್ಟು ಅವರ ಸಂಕ್ಷಿಪ್ತ ಪರಿಚಯ ಮಾಡಿದರು.