


ಉಜಿರೆ: ವಿವಿಧ ಜ್ಞಾನಶಿಸ್ತುಗಳ ಸಂಶೋಧನಾ ವಲಯಗಳು ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ವಿಸ್ತಾರಗೊಳ್ಳುವ ಅವಶ್ಯಕತೆ ಇದೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನಜ್ಮೆಂಟ್ ಪ್ರಾಧ್ಯಾಪಕ, ಐಸಿ ನಿರ್ದೇಶಕ ಡಾ.ರಾಜಶೇಖರನ್ ಪಿಳ್ಳೈ ಅಭಿಪ್ರಾಯಟ್ಟರು.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕೋಶವು ಯಶಸ್ವೀ ಸಂಶೋಧನಾ ಪ್ರಸ್ತಾವನೆ ರಚನೆ ಕುರಿತು ಪದವಿ ಮತ್ತು ಸ್ನಾತಕೊತ್ತರ ಪದವಿ ಬೋಧಕರು, ಸಂಶೋಧನಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸಂಶೋಧನಾ ಯೋಜನೆಗಳಿಗಾಗಿ ಹೆಚ್ಚಿನ ಅನುದಾನವನ್ನು ಮೀಸಲಿಡುತ್ತಿವೆ.ಸಂಶೋಧನಾರ್ಥಿಗಳ ಆಸಕ್ತಿಯನ್ನು ಗಮನಿಸಿ ಪ್ರತಿವರ್ಷವೂ ಸಂಶೋಧನೆಯ ಅವಕಾಶಗಳನ್ನೂ ವಿಸ್ತರಿಸಲಾಗುತ್ತಿದೆ.ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಬೋಧಕರು ಮತ್ತು ವಿದ್ಯಾರ್ಥಿಗಳು ಸಂಶೋಧನಾ ವಲಯದ ಸಾಧ್ಯತೆಗಳನ್ನು ವಿಸ್ತರಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ ಎಂದರು.ಬೋಧಕರು ಮತ್ತು ವಿದ್ಯಾರ್ಥಿಗಳ ಸಂಶೋಧನಾ ಬದ್ಧತೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳು ಪೂರಕ ತಾಂತ್ರಿಕ ಮತ್ತು ಆಡಳಿತಾತ್ಮಕ ಸೌಲಭ್ಯಗಳನ್ನು ಒದಗಿಸಿಕೊಡಬೇಕು.ಈ ಬಗೆಯ ಆದ್ಯತೆಯಿಂದ ಸಂಶೋಧನೆಗೆ ಹೆಚ್ಚು ಮನ್ನಣೆ ಸಿಗುತ್ತದೆ. ಸಂಶೋಧನೆಯ ಫಲಿತಾಂಶಗಳು ಬೋಧನೆಯ ಶೈಕ್ಷಣಿಕ ಆಯಾಮಕ್ಕೆ ಹೊಸ ಶಕ್ತಿ ನೀಡುತ್ತವೆ.ಇದರಿಂದಾಗಿ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಸ್ವರೂಪವು ಪ್ರಯೋಗಶೀಲವೆನ್ನಿಸಿಕೊಳ್ಳುತ್ತದೆ ಎಂದು ಹೇಳಿದರು.
ಸಂಶೋಧನಗೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಂಶೋಧನಾಸಕ್ತರ ಸಂಖ್ಯೆಯನ್ನು ಹೆಚ್ಚಿಸಬಹುದು. ಸ್ವಯಂ ಆಸಕ್ತಿ ಮತ್ತು ಹೊಸದನ್ನು ಅನ್ವೇಷಿಸುವ ಬದ್ಧತೆಯಿದ್ದಾಗ ಮಾತ್ರ ಇಂತಹ ತರಬೇತಿ ಕಾರ್ಯಕ್ರಮಗಳು ಅರ್ಥಪೂರ್ಣಗೊಳ್ಳುತ್ತವೆ ಎಂದು ನುಡಿದರು.


ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿದರು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯು ಸಂಶೋಧನಾಪರ ಆಡಳಿತಾತ್ಮಕ ನಿಲುವಿನೊಂದಿಗೆ ಮಹತ್ವಪೂರ್ಣ ಸಂಶೋಧನೆಗಳಿಗೆ ಬೆಂಬಲ ನೀಡಿದೆ.ಸಂಸ್ಥೆಯ ಬೋಧಕ ವಲಯ ವಿನೂತನ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವಲ್ಲಿ ಈ ಬೆಂಬಲ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.
ಸಂಶೋಧನೆಗಾಗಿ ಪ್ರತ್ಯೇಕ ಸಮಯವನ್ನು ಮೀಸಲಿರಿಸುವ ಬದ್ಧತೆಯನ್ನು ಬೋಧಕವಲಯ ತೋರಬೇಕು.ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ನಿಯತಕಾಲಿಕೆಗಳಿಗಾಗಿ ಗುಣಮಟ್ಟದ ಸಂಶೋಧನಾ ಬರಹಗಳನ್ನು ಬರೆಯುವುದರ ಕಡೆಗೆ ಆಸಕ್ತಿವಹಿಸಬೇಕು. ಅನ್ವೇಷಣಾ ಪ್ರಜ್ಞೆಯ ಆಧಾರದಲ್ಲಿ ವಿಭಿನ್ನವಾಗಿ ಬರೆಯುವ ಮಾದರಿ ರೂಪಿಸಿಕೊಂಡಾಗ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಂಶೋಧನಾ ಯೋಜನೆಗಳ ಅನುದಾನ ಪಡೆಯುವುದು ಸುಲಭಸಾಧ್ಯವಾಗುತ್ತದೆ ಎಂದರು.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್.ಪಿ, ಧನ್‌ಬಾದ್‌ನ ಬಿಎಸ್‌ಆರ್ ಹಾಗೂ ಸಿಐಎಮ್‌ಎಫ್‌ಆರ್‌ನ ಹಿರಿಯ ವಿಜ್ಞಾನಿ ಡಾ.ಎಮ್.ಎಸ್.ಸಂತೋಷ, ಹಂಪಿ ಕನ್ನಡ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಯರಿಸ್ವಾಮಿ ಉಪಸ್ಥಿತರಿದ್ದರು.
ವೈಷ್ಣವಿ ಮತ್ತು ತಂಡದವರು ಪ್ರಾರ್ಥಿಸಿದರು.ಕಾರ್ಯಾಗಾರದ ಸಂಚಾಲಕ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ಎಸ್ ಸ್ವಾಗತಿಸಿದರು.ಬಯೋಟೆಕ್ ವಿಭಾಗದ ಮುಖ್ಯಸ್ಥೆ ಡಾ.ಪ್ರಾರ್ಥನಾ.ಜೆ ನಿರೂಪಿಸಿದರು. ಎಸ್.ಡಿ.ಎಂ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ನಿರ್ದೇಶಕಿ ಡಾ.ಸೌಮ್ಯ.ಬಿ.ಪಿ ವಂದಿಸಿದರು.








