ಗುರಿಪಳ್ಳ: “ಜೀವನದಲ್ಲಿ ಆಶಾಭಾವನೆ ಇರಬೇಕು. ಕುತೂಹಲಗಳು ಹುಟ್ಟಿದಾಗ ಪ್ರಶ್ನೆ ಕೇಳಬೇಕು ಉತ್ತರ ಹುಡುಕಬೇಕು.ಅದು ಸಿಕ್ಕಾಗ ಅದನ್ನು ಒಪ್ಪಿಕೊಂಡು ಜೀವನದಲ್ಲಿ ಮುನ್ನುಗ್ಗಬೇಕು. ಮನಸ್ಸು ಒತ್ತಡದಲ್ಲಿ ಸಿಲುಕಿಕೊಂಡಾಗ ಎಲ್ಲದು ಒಳ್ಳೆಯದಿದೆ ಎಂದು ಮನಸ್ಸಿಗೆ ಸಮಾಧಾನ ಪಡಿಸಿಕೊಂಡಾಗ ಉತ್ತಮ ಭಾವನೆ ಮನದಲ್ಲಿ ಜನ್ಮ ತಾಳುತ್ತದೆ.
ಉತ್ತಮ ಭಾವನೆಗಳು ಇದ್ದಾಗ ಆತ್ಮವಿಶ್ವಾಸದಿಂದ ಯಾವ ಕಾರ್ಯವನ್ನಾದರೂ ನೆರವೇರಿಸಲು ಸಾಧ್ಯವಾಗುತ್ತದೆ. ನಮ್ಮ ಪ್ರಯತ್ನಗಳು ಸಾಮಾನ್ಯವಾಗಿರಬಾರದು ಅಸಾಮಾನ್ಯವಾಗಿರಬೇಕು ಆಗಲೇ ಯಶಸ್ಸು ಸಾಧ್ಯ. ಎಂದು ಕರ್ನಾಟಕ ಸರಕಾರ ವಿಧಾನ ಪರಿಷತ್ತಿನ ಶಾಸಕರಾದ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿದರು.
ಗುರಿಪಳ್ಳದ ದ.ಕ.ಜಿ.ಪಂ.ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ”ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ” ಎಂಬ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
“ಉತ್ತಮ ಸಂವಹನ ಕಲೆ ಇದ್ದಾಗ ನಾಯಕತ್ವದ ಗುಣ ವೃದ್ಧಿಯಾಗಲು ಸಾಧ್ಯ. ಇಂತಹ ಶಿಬಿರಗಳ ಮೂಲಕ ಉತ್ತಮ ಸಂವಹನ ಕಲೆ ದುಪ್ಪಟ್ಟಾಗುತ್ತದೆ. ಆತ್ಮವಿಶ್ವಾಸ ಮೂಡಿಸುವ ಕೆಲಸ ಕಾರ್ಯಗಳಿಂದ ಒಳ್ಳೆಯ ಕಲಿಕೆಯಿಂದ ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡಲು ಶಿಬಿರ ಪೂರಕವಾಗುತ್ತದೆ. ನಿರಂತರವಾಗಿ ಈ ಅನುಭವದ ನೆನಪು ಇರಲಿ ನಿಮ್ಮ ಪ್ರಗತಿಯ ಪಥಕ್ಕೆ ನೆರವಾಗಲಿ.” ಎಂದು ಶ್ರೀ ಧ.ಮಂ.ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ ಕುಮಾರ ಹೆಗ್ಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಶಿಕ್ಷಣಾಧಿಕಾರಿ ತಾರಾಕೇಸರಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ್ , ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ, ಗುರಿಪಳ್ಳದ ಸ.ಹಿ.ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಸವಿತಾ, ಮುಖ್ಯೋಪಾಧ್ಯಾಯರಾದ ಮಂಜುಳಾ, ವಾರ್ಷಿಕ ವಿಶೇಷ ಶಿಬಿರ 2024ರ ಸ್ವಾಗತ ಸಮಿತಿಯ ಸಹ ಸಂಚಾಲಕ ರಮಾನಂದ ಶರ್ಮ, ಹಾಗೂ ಸಹ ಸಂಚಾಲಕ ಚಂದ್ರಹಾಸ ಪಟ್ಟವರ್ಧನ್, ಶಿಬಿರಾಧಿಕಾರಿಗಳಾದ ಶಿವಕುಮಾರ್ ಪಿ.ಪಿ , ಮಹೇಶ್ ಆರ್ ಕು. ಹರಿಣಿ ಉಪಸ್ಥಿತರಿದ್ದರು.
ರಾ.ಸೇ.ಯೋ. ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಪ್ರೊ. ದೀಪಾ ಆರ್. ಪಿ ವಂದಿಸಿದರು, ಸ್ವಯಂ ಸೇವಕಿ ಶ್ರೇಯಾ ಕುಮಾರಿ ನಿರೂಪಿಸಿದರು.