ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗಗಳ ಜಂಟಿ ಆಶ್ರಯದಲ್ಲಿ ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆಯ ಸಂರಕ್ಷಣಾ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ.ಅಮೃತೇಶ್ ಅವರು ಮಾತನಾಡಿ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ ಮತ್ತು ಈ ಕಾರ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳು, ವಿಶೇಷವಾಗಿ ಸಸ್ಯಶಾಸ್ತ್ರ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿಏ.ಕುಮಾರ್ ಹೆಗ್ಡೆ ಅವರು ಈ ಭಾಗದ ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ ವೈಜ್ಞಾನಿಕವಾಗಿ ಸಂರಕ್ಷಣೆಯನ್ನು ಮಾಡುವ ವಿವಿಧ ಹಂತಗಳನ್ನು ವಿವರಿಸಿದರು.
ಪ್ರಾಧ್ಯಾಪಕ ಅಭಿಲಾಶ್ ಅವರು ಈ ಭಾಗದ ಸಸ್ಯ ವೈವಿಧ್ಯತೆಯನ್ನು ಸಚಿತ್ರವಾಗಿ ವಿವರಿಸಿ ತಿಳಿಸಿದರು.
ಕಾಲೇಜಿನ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಶಕುಂತಲಾ ಸ್ವಾಗತಿಸಿ, ಸ್ವಾತಿ ಅವರು ವಂದಿಸಿ, ರಶ್ಮಿ ಅವರು ನಿರ್ವಹಿಸಿದರು.