ಖ್ಯಾತ ಸಿನಿಮಾ ನಟ, ಸಿರಿ ಬ್ರ್ಯಾಂಡ್ ರಾಯಭಾರಿ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ- ಸಿರಿ ಸಂಸ್ಥೆಯ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ಒಂದು ಭಾವನಾತ್ಮಕ ಸಂಬಂಧ ಬೆಸೆದಿದೆ: ರಮೇಶ್ ಅರವಿಂದ್

0

ಬೆಳ್ತಂಗಡಿ: ಖ್ಯಾತ ಚಲನಚಿತ್ರ ನಟ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ರಾಯಭಾರಿಯೂ ಆಗಿರುವ ರಮೇಶ್ ಅರವಿಂದ್‌ರವರು ಸಿರಿ ಸಂಸ್ಥೆಯ ಪ್ರಧಾನ ಕಛೇರಿ ಉಜಿರೆಗೆ ಜನವರಿ.26 ರಂದು ಭೇಟಿ ನೀಡಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್‌ರವರು ಪೂಜ್ಯ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಹಾಗೂ ಸಿರಿ ಎಂ.ಡಿ ಕೆ.ಎನ್ ಜನಾರ್ಧನರವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಸಿರಿ ಸಂಸ್ಥೆಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಸಿರಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿರುವುದು ನನಗೆ ಬಹಳ ಹೆಮ್ಮೆಯೆನಿಸುತ್ತಿದೆ.

ಸಿರಿ ಸಂಸ್ಥೆಯ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ಒಂದು ಭಾವನಾತ್ಮಕ ಸಂಬಂಧ ಬೆಸೆದಿದೆ.ಯಾಕೆಂದರೆ ಈ ಸಂಸ್ಥೆಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಪ್ರತೀ ಉತ್ಪನ್ನಗಳಲ್ಲಿಯೂ ಬಡ ಹೆಣ್ಣು ಮಕ್ಕಳ ಪರಿಶ್ರಮ ಅಡಗಿದೆ.ನಾವೆಲ್ಲರೂ ನಮ್ಮ ದಿನಬಳಕೆಗೆ ಸಿರಿ ಉತ್ಪನ್ನಗಳನ್ನು ಉಪಯೋಗಿಸಿದ್ದಲ್ಲಿ ನಮ್ಮ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಪ್ರತಿಯೋರ್ವ ಹೆಣ್ಣುಮಕ್ಕಳ ಬಾಳಿನಲ್ಲೂ ಸದಾ ನಗು, ನೆಮ್ಮದಿಯಿಂದ ಕೂಡಿರಲು ಸಹಕಾರಿಯಾಗಲಿದೆ.

ಆದುದರಿಂದ ಪೂಜ್ಯರು ಹಾಗೂ ಮಾತೃಶ್ರೀ ಆಮ್ಮನವರ ಆಸರೆಯಲ್ಲಿ ದುಡಿಯುತ್ತಿರುವ ಎಲ್ಲಾ ಸಿರಿ ಸಿಬ್ಬಂದಿಗಳೂ ಸದಾ ನಗುಮೊಗದಿಂದ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸವನ್ನಿಟ್ಟು ಶ್ರದ್ದೆಯಿಂದ, ಇಷ್ಟಪಟ್ಟು ಸಂಸ್ಥೆಯ ಕೆಲಸಕಾರ್ಯಗಳನ್ನು ನಿರ್ವಹಿಸಿದ್ದಲ್ಲಿ ಖಂಡಿತವಾಗಿಯೂ ಯಶಸ್ಸು ತಮ್ಮೆಲ್ಲರನ್ನೂ ಹರಸಿಕೊಂಡು ಬರಲಿದೆ ಎಂದು ಸಿರಿ ಸಿಬ್ಬಂದಿಗಳಲ್ಲಿ ಸ್ಪೂರ್ತಿ ತುಂಬಿದರು.ಜೊತೆಗೆ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಕುರಿತಾಗಿ ತಮ್ಮ ವಿದ್ಯಾರ್ಥಿ ಜೀವನದ ಸಿಹಿ ಅನುಭವಗಳನ್ನು ಹಂಚಿಕೊಂಡರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ಧನರವರು ಪೂಜ್ಯರು, ಅಮ್ಮನವರು ಹಾಗೂ ಸಿರಿ ಸಂಸ್ಥೆಯ ಮೇಲೆ ಅಪಾರ ಪ್ರೀತಿ, ಅಭಿಮಾನವನ್ನು ಹೊಂದಿರುವ ರಮೇಶ್ ಅರವಿಂದರವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಸರಳತೆ, ಸಜ್ಜನಿಕೆ ಹಾಗೂ ಮೌಲ್ಯಯುತ ಜೀವನ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲಾ ಸಿರಿ ಸಿಬ್ಬಂದಿಗಳ ಪರವಾಗಿ ರಮೇಶ್ ಅರವಿಂದರವರನ್ನು ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ರಾಜೇಶ್ ಪೈ ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕರಾದ ಪ್ರಸನ್ನ ಯು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ರಮೇಶ್ ಅರವಿಂದ್‌ರವರನ್ನು ಪ್ರೀತಿಪೂರ್ವಕವಾಗಿ ಅಭಿನಂದಿಸಿ, ಗೌರವಾರ್ಪಣೆ ಸಲ್ಲಿಸಿದರು.

ಸಿರಿ ಗೋದಾಮು ಪ್ರಬಂಧಕರಾದ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

ತದನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಮೇಶ್ ಅರವಿಂದರವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.ನಂತರ ಪೂಜ್ಯ ಡಾ।। ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದು, ಸಿರಿ ಸಂಸ್ಥೆಯ ಅಭಿವೃದ್ಧಿ ಕುರಿತಾಗಿ ಪೂಜ್ಯರಲ್ಲಿ ಚರ್ಚಿಸಿದರು.

ಈ ಸಂದರ್ಭದಲ್ಲಿ ರಮೇಶ್ ಅರವಿಂದರವರ ರಾಯಭಾರಿಯಲ್ಲಿ ಸಿರಿ ಸಂಸ್ಥೆಯು ಸಮಗ್ರ ಏಳಿಗೆಯನ್ನು ಕಾಣುತ್ತಿರುವುದಕ್ಕೆ ಪೂಜ್ಯರು ರಮೇಶ್ ಅರವಿಂದರವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here