ಉಜಿರೆ:ಭಾರತದ ವೈವಿಧ್ಯಮಯ ಗತವೈಭವದ ಮೆಲುಕು, ವರ್ತಮಾನದ ಪ್ರಗತಿಯ ಹೆಜ್ಜೆಗಳ ಬಿಂಬಗಳು, ಸಂವಿಧಾನದ ಶ್ರೇಷ್ಠತೆಯ ಸೊಗಡನ್ನು ಕಟ್ಟಿಕೊಡುವ ಕಲಾತ್ಮಕ ಪ್ರದರ್ಶನದ ಮೂಲಕ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮವನ್ನು ಅರ್ಥಪೂರ್ಣಗೊಳಿಸಿದರು.
ಉಜಿರೆಯ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಎಸ್ ಡಿ ಎಂ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಯ ಸಮ್ಮುಖದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಶರತ್ ಕೃಷ್ಣ ಪಡ್ವೆಟ್ನಾಯ ಧ್ವಜಾರೋಹಣ ನೆರವೇರಿಸಿದರು. ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭಾರತದ ಸಮಗ್ರತೆಯ ಶ್ರೇಷ್ಠತೆಯನ್ನು ಧ್ವಜಾರೋಹಣ ಸಮಾರಂಭ ಎತ್ತಿ ಹಿಡಿಯಿತು.ಸಂಸದೀಯ ಪ್ರಜಾಪ್ರಭುತ್ವದ ಜೀವಂತಿಕೆಯನ್ನು ಕಾಣಿಸುವ ಸಂವಿಧಾನದ ಶಕ್ತಿಯನ್ನು ಬಿಂಬಿಸಿತು.ಸಾಹಿತ್ಯ, ಸಂಸ್ಕೃತಿ, ಕಲಾತ್ಮಕತೆ, ವೈಜ್ಞಾನಿಕ ಸಾಧನೆಗಳ ಹೆಜ್ಜೆಗಳು ಧ್ವನಿತವಾದವು.
ಕಂಸಾಳೆ, ಕರಗ, ಕೋಲಾಟ, ವೀರಗಾಸೆಯ ನೃತ್ಯ ಕಂಗೊಳಿಸಿತು. ಕೃಷಿ ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ಅಭಿವ್ಯಕ್ತಿ ವಿಶೇಷ ಎನ್ನಿಸಿತು.ಯಕ್ಷಗಾನ, ಹುಲಿವೇಷದ ನೃತ್ಯಧಾರಿಗಳು ಗಮನ ಸೆಳೆದರು.
ಮೈಸೂರು ಅರಸರ ರಾಜವೈಭವವನ್ನು ವಿದ್ಯಾರ್ಥಿಗಳು ನೆನಪಿಸಿದರು. ಮೈಸೂರು ದಸರಾ ನೆನಪಿಸಿದ ವಿವಿಧ ವಿನ್ಯಾಸಗಳು ಕಂಗೊಳಿಸಿದವು. ಭರತನಾಟ್ಯ, ಕೂಚಿಪುಡಿ, ಮಣಿಪುರಿ ನೃತ್ಯ ಸೊಗಡನ್ನು ವಿದ್ಯಾರ್ಥಿ ಪ್ರತಿಭಾನ್ವಿತರು ಪ್ರಸ್ತುತಪಡಿಸಿದರು.
1857 ರಿಂದ 1947ರವರೆಗಿನ ಸ್ವಾತಂತ್ರ್ಯ ಹೋರಾಟದ ವೀರಕಥನದ ಅನಾವರಣ ಹಲವರ ಮೆಚ್ಚುಗೆಗೆ ಪಾತ್ರವಾಯಿತು. ಸ್ವದೇಶಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಲಗಂಗಾಧರ ತಿಲಕ್ ಅವರ ವ್ಯಕ್ತಿತ್ವವನ್ನು ಬಿಂಬಿಸಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಾತ್ಮಕ ಸ್ಥಿರಚಿತ್ರದ ಐದುನೂರರ ನೋಟಿನ ಭಿತ್ತಿಯ ಜೊತೆಗೆ ವಿದ್ಯಾರ್ಥಿಗಳು ಅತ್ಯದ್ಭುತ ಸ್ಥಿರನಟನಾ ಬಿಂಬದ ಮೂಲಕ ದಂಡಿಯಾತ್ರೆಯ ವಿವರಗಳನ್ನು ಕ್ಷಣಾರ್ಧದಲ್ಲಿ ಕಾಣಿಸಿದರು.
ರತ್ನಮಾನಸ ವಿದ್ಯಾರ್ಥಿಗಳು ‘ನಮ್ಮ ಸಂವಿಧಾನ’ ಶೀರ್ಷಿಕೆಯೊಂದಿಗೆ ಸಂಸದೀಯ ಪ್ರಜಾಪ್ರಭುತ್ವದ ಮಹತ್ವ ಸಾರುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಅಂಬೇಡ್ಕರ್ ಪಾತ್ರಧಾರಿ ಬಾಲಕನ ಮೂಲಕ ಸಂವಿಧಾನದ ಮಹತ್ವ, ಸಂವಿಧಾನದ ಗ್ರಂಥದ ಕಾಣಿಸುವಿಕೆಯ ವೈಶಿಷ್ಟ್ಯ ವಿಶೇಷವಾಗಿತ್ತು.
ವಿದ್ಯಾರ್ಥಿಗಳು 12ನೇ ಶತಮಾನದ ವಚನ ಚಳುವಳಿ ನೆನಪಿಸಿದರು. ಅಕ್ಕ ಮಹಾದೇವಿ, ಮೀರಾಬಾಯಿ ಪಾತ್ರಧಾರಿಗಳಿದ್ದರು. ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಸಮಾನತೆಯ ಕಿರಣ, ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ, ಮೊದಲ ಮಹಿಳಾ ವೈದ್ಯ ಆನಂದಿ ಗೋಪಾಲ್, ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ, ಮೊದಲ ರಾಜ್ಯಪಾಲೆ ಸರೋಜಿನಿ ಅವರನ್ನು ನೆನಪಿಸುವಂತಿದ್ದ ಪಾತ್ರಧಾರಿಗಳು ಈಗಾಗಲೇ ಆಗಿಹೋದ ಮೌಲಿಕ ವ್ಯಕ್ತಿತ್ವಗಳ ಪ್ರಭೆಯನ್ನು ಹರಡಿದರು.
ಡಾ.ವಿಕ್ರಂ ಸಾರಾಭಾಯಿ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಮೇರಿ ಕೋಮ್, ಸಾನಿಯಾ ಮಿರ್ಜಾ, ಧ್ಯಾನ್ ಚಂದ್, ಸಚಿನ್ ತೆಂಡೂಲ್ಕರ್, ಮದರ್ ತೆರೆಸಾ, ಸುಧಾ ಮೂರ್ತಿ ಅವರ ಕೊಡುಗೆಗಳ ವಿವರಗಳು, ಇಸ್ರೋದ ಚಂದ್ರಯಾನ 3, ಭಾರತೀಯ ರೈಲ್ವೆ ಸಾಧನೆ, ಸ್ವದೇಶಿ ನಿರ್ಮಿತ ಬುಲೆಟ್ ಟ್ರೇನ್ ಸಂಬಂಧಿತ ಪ್ರಾತ್ಯಕ್ಷಿಕೆ ಮಾಹಿತಿ ಕಣ್ಮನ ಸೆಳೆಯಿತು.