ಸಿಯೋನ್ ಆಶ್ರಮ ಟ್ರಸ್ಟಿಗೆ ರಜತ ಸಂಭ್ರಮ- ಮಾ.21, 22 ಸ್ಪಂದನ ರಾಜ್ಯ ಮಟ್ಟದ ವಿಚಾರ ಸಂಕಿರಣ- ಪತ್ರಿಕಾಗೋಷ್ಠಿ

0

ನೆರಿಯ: ಇಲ್ಲಿಯ ಗಂಡಿಬಾಗಿಲು ಸಿಯೋನ್ ಆಶ್ರಮ ಟ್ರಸ್ಟ್ ಪ್ರಾರಂಭಗೊಂಡು 25 ವರ್ಷ ಪೂರೈಸಿ ರಜತ ಸಂಭ್ರಮದಲ್ಲಿದ್ದು ಇದರ ಅಂಗವಾಗಿ ಮಾ.21 ಮತ್ತು 22 ರಂದು ಸ್ಪಂದನ 2024 ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ ಎಂದು ಮ್ಯಾನೇಜಿಂಗ್ ಟ್ರಸ್ಟಿ ಡಾ.ಯು.ಸಿ.ಪೌಲೋಸ್ ಹೇಳಿದರು.

ಸಿಯೋನ್ ಆಶ್ರಮ ಸಮಾಜದಲ್ಲಿ ಅಸಹಾಯಕತೆಯಿಂದ ಬೀದಿಪಾಲಾಗಿದ್ದ ಮನೋರೋಗಿಗಳು, ಬುದ್ಧಿಮಾಂದ್ಯರು, ಅಂಗವಿಕಲರು, ನಿರ್ಗತಿಕರು ಮತ್ತು ವಿಶೇಷ ಚೇತನ ಮಕ್ಕಳು, ವೃದ್ಧರು, ನಾನಾ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಪಟ್ಟವರನ್ನು ಯಾವುದೇ ಜಾತಿ ಮತ ಭೇದಭಾವವಿಲ್ಲದೆ ಮಾತೃವಾತ್ಸಲ್ಯತೆಯಿಂದ ಆರೈಕೆ ಮಾಡಿ ಅಗತ್ಯ ಮೂಲಭೂತ ಸೌಕರ್ಯ, ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸಲು ಕಳೆದ 25 ವರ್ಷಗಳಿಂದ ಪ್ರಯತ್ನಿಸುತ್ತಿದೆ.

“ರಜತ ಮಹೋತ್ಸವ ಕಾರ್ಯಕ್ರಮ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್, ಪೇಜಾವರ ಶ್ರೀ, ಸುಬ್ರಹ್ಮಣ್ಯಶ್ರೀ, ಮಾಣಿಲಶ್ರೀ, ಕನ್ಯಾಡಿಶ್ರೀ ಹಾಗೂ ನಾಲ್ಕು ಮಂದಿ ಬಿಷಪ್ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

“1999ರಲ್ಲಿ ಹುಲ್ಲಿನ ಶೆಡ್ ನಲ್ಲಿ ಆರಂಭವಾದ ಆಶ್ರಮದಲ್ಲಿ ಪ್ರಸ್ತುತ 387 ಮಂದಿ ಇದ್ದಾರೆ.900ಕ್ಕಿಂತ ಅಧಿಕ ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.ಪ್ರತಿ ದಿನ 1.5 ಲಕ್ಷ ರೂ ತಿಂಗಳಿಗೆ 6 ಕೋಟಿ ರೂ ಖರ್ಚು ಇದೆ.ಅಲ್ಪಸಂಖ್ಯಾತರ ನಿಗಮದಿಂದ ವಾರ್ಷಿಕ 83 ಲಕ್ಷ ರೂ.ಮಾತ್ರ ಅನುದಾನ ದೊರೆಯುತ್ತಿದೆ.”ಎಂದು ಹೇಳಿದರು

-ಹಕ್ಕೋತ್ತಾಯ ಮಂಡನೆ-
ರಾಜ್ಯದಲ್ಲಿ 300ಕ್ಕಿಂತ ಅಧಿಕ ಇಂತಹ ಆಶ್ರಮಗಳಿದ್ದು ಸರಕಾರವು ಇವುಗಳಿಗೆ ಸ್ಥಿರವಾದ ಸಹಕಾರ ನೀಡಬೇಕು ಎಂಬ ಹಕ್ಕೊತ್ತಾಯವನ್ನು ಕಾರ್ಯಕ್ರಮದಲ್ಲಿ ಮಂಡಿಸಲಾಗುವುದು.ವಿಕಲಚೇತನರ, ಅನಾಥರ, ಮನೋರೋಗಿಗಳ ಬದುಕಿಗೆ ಬೆಳಕಾಗುವ ಬಗ್ಗೆ ಸರಕಾರಕ್ಕೆ ಒತ್ತಡ ತರುವುದು ಕಾರ್ಯಕ್ರಮದ ಉದ್ದೇಶ”ಎಂದು ಹೇಳಿದರು.ರಜತ ಮಹೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿ ಸದಸ್ಯರಾದ ಬಿ.ಎ.ರೆಹಮಾನ್, ಟಿ.ಜೆ.ಮೋರಾಸ್, ವಿ.ಟಿ.ಸೆಬಾಸ್ಟಿಯನ್, ಪ್ರಕಾಶ್ ಪಿಂಟೋ, ಟಿ.ಪಿ.ಜೋಸೆಫ್ ಹಾಗೂ ನಂದಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here