ಸೇನಾನಿ ಏಕನಾಥ್ ಶೆಟ್ಟಿಯವರಿದ್ದ ವಿಮಾನದ ಅವಶೇಷಗಳು ಚೆನ್ನೈನ ಸಮುದ್ರದಲ್ಲಿ ಪತ್ತೆ-ಸೇನೆಯಿಂದ ಅಧಿಕೃತ ಮಾಹಿತಿ ಕುಟುಂಬದವರಿಗೆ ಬಂದಿಲ್ಲ-ಸುದ್ದಿಗೆ ಸ್ಪಷ್ಟನೆ

0

ಬೆಳ್ತಂಗಡಿ: ಏಳೂವರೆ ವರ್ಷಗಳ ಹಿಂದೆ ಹಾರಾಟ ನಡೆಸುವ ವೇಳೆ ನಾಪತ್ತೆಯಾಗಿದ್ದ ವಾಯುಪಡೆಯ ಸಾರಿಗೆ ವಿಮಾನ ಎಎನ್ -32ರ ಅವಶೇಷಗಳನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ವಿಮಾನದಲ್ಲಿ ಏಕೈಕ ಕನ್ನಡಿಗ ಯೋಧ ಏಕನಾಥ ಶೆಟ್ಟಿ ಇದ್ದರು. ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆಯ ಹವ್ಯಾಕ ಸಭಾಭವನದ ಎದುರುಗಡೆ ಮನೆಯ ನಿವಾಸಿಯಾಗಿದ್ದ ಏಕನಾಥ್ ಶೆಟ್ಟಿಯವರು ಕರ್ತವ್ಯದಲ್ಲಿದ್ದಾಗ ನಾಪತ್ತೆಯಾಗಿದ್ದರು.

ಜುಲೈ 22, 2016ರ ಬೆಳಗ್ಗೆ 8.30ಕ್ಕೆ ಆರು ಮಂದಿ ವಿಮಾನ ಸಿಬ್ಬಂದಿ ಹಾಗೂ 23 ವಾಯುಪಡೆ ಸಿಬ್ಬಂದಿಯೊಂದಿಗೆ ಎಎನ್-32 ಮಧ್ಯಮ ಗಾತ್ರದ ಸಾಗಾಣಿಕೆ ವಿಮಾನ(ನೋಂದಣಿ ಸಂಖ್ಯೆ: ಕೆ-2743)ವು ಚೆನ್ನೈನಿಂದ ಪೋರ್ಟ್ ಬ್ಲರ್ ಗೆ ವಾರದ ದಿನಚರಿಯಂತೆ ಪ್ರಯಾಣ ಬೆಳೆಸಿತ್ತಾದರೂ, ಅದು ತನ್ನ ಗಮ್ಯವನ್ನು ತಲುಪಿರಲೇ ಇಲ್ಲ. ಕೂಡಲೇ ಹಡಗುಗಳು ಹಾಗೂ ವಿಮಾನಗಳ ಮೂಲಕ ಭಾರಿ ಪ್ರಮಾಣದ ಶೋಧ ಕಾರ್ಯಗಳನ್ನು ನಡೆಸಲಾಗಿತ್ತಾದರೂ, ನಾಪತ್ತೆಯಾಗಿದ್ದ ಸಿಬ್ಬಂದಿಗಳು ಹಾಗೂ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಲಾಗಿರಲಿಲ್ಲ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಾಯುಪಡೆಯು, “ಭೂವಿಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಇತ್ತೀಚೆಗೆ ಆಳ ಸಮುದ್ರ ಶೋಧನೆ ಸಾಮರ್ಥ್ಯ ಹೊಂದಿರುವ ಸ್ವಾಯತ್ತ ಜಲಾಂತರ್ಗಾಮಿ ವಾಹನವನ್ನು ಎಎನ್-32 ವಿಮಾನವು ಕಡೆಯದಾಗಿ ನಾಪತ್ತೆಯಾಗಿದ್ದ ಸ್ಥಳದಲ್ಲಿ ನಿಯೋಜಿಸಿತ್ತು” ಎಂದು ಹೇಳಿದೆ. “ಈ ಶೋಧ ಕಾರ್ಯವನ್ನು ಸಮುದ್ರದ 3400 ಮೀಟರ್ ಅಡಿಯಲ್ಲಿ ನಡೆಸಲಾಗಿದ್ದು, ಇದಕ್ಕಾಗಿ ಮಲ್ಟಿ ಬೀಮ್ ಸೋನಾರ್ (ಸೌಂಡ್‌ ನ್ಯಾವಿಗೇಶನ್‌ ಆ್ಯಂಡ್ ರೇಂಜಿಂಗ್, ಸಿಂಥೆಟಿಕ್ ಅಪರ್ಚರ್ ಸೋನಾರ್ ಹಾಗೂ ಹೈ ರೆಸಲ್ಯೂಶನ್ ಫೋಟೊಗ್ರಫಿಯನ್ನು ಹೊಂದಿದ್ದ ವಿವಿಧ ಪೇ ಲೋಡ್ ಗಳನ್ನು ಬಳಸಲಾಗಿತ್ತು. ಶೋಧ ಕಾರ್ಯದ ಚಿತ್ರಗಳು ಚೆನ್ನೈನ ಸಮುದ್ರ ತೀರದಿಂದ 140 ನಾಟಿಕಲ್ ಮೈಲುಗಳು (ಅಂದಾಜು 310 ಕಿಮೀ) ಆಳದಲ್ಲಿ ಅಪಘಾತಕ್ಕೀಡಾಗಿರುವ ವಿಮಾನದ ಅವಶೇಷಗಳಿರುವುದನ್ನು ಸೂಚಿಸುತ್ತಿವೆ” ಎಂದೂ ತಿಳಿಸಿದೆ.

ಶೋಧ ಕಾರ್ಯದ ಚಿತ್ರಗಳನ್ನು ಕೂಲಂಕಶವಾಗಿ ಪರಿಶೀಲಿಸಲಾಗಿದ್ದು, ಆ ಚಿತ್ರಗಳು ಎಎನ್-32 ವಿಮಾನದೊಂದಿಗೆ ಹೋಲುತ್ತಿವೆ ಎಂದು ಹೇಳಿರುವ ಭಾರತೀಯ ವಾಯುಪಡೆಯು, ಈ ಸ್ಥಳದಲ್ಲಿ ಈ ಹಿಂದೆ ಬೇರೆ ಯಾವುದೇ ವಿಮಾನ ನಾಪತ್ತೆಯಾಗಿರುವ ಇತಿಹಾಸಗಳಿಲ್ಲ.ಆದ್ದರಿಂದ ಈ ವಿಮಾನದ ಅವಶೇಷಗಳನ್ನು ಎ ಎನ್ 32 ವಿನ ಅವಶೇಷಗಳು ಎಂದು ಅಂದಾಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಯೋಧ ಏಕನಾಥ್ ಶೆಟ್ಟಿ ವಿಮಾನದಲ್ಲಿದ್ದ ಏಕೈಕ ಕನ್ನಡಿಗ ಏಕನಾಥ್ ಶೆಟ್ಟಿಯವರಾಗಿದ್ದಾರೆ. ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಏಕನಾಥ್ ಶೆಟ್ಟಿಯವರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದರು. ಜೂ.30 1965ರಲ್ಲಿ ಜನಿಸಿದ್ದ ಏಕನಾಥ್ ಶೆಟ್ಟಿಯವರು ಮಾರ್ಚ್ 8 1985ರಂದು ಭಾರತೀಯ ಸೇನೆಗೆ ಸೇರಿದರು. 24 ವರ್ಷ ಮದ್ರಾಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿದ್ದರು.ಕಾರ್ಗಿಲ್ ವಾರ್, ಜಮ್ಮು ಕಾಶ್ಮೀರ, ಪಂಜಾಬ್, ಅರುಣಾಚಲ ಪ್ರದೇಶ, ಕೋಲ್ಕತ್ತಾ ಮುಂತಾದೆಡೆ ಸೇವೆ ಸಲ್ಲಿಸಿದ್ದ ಏಕನಾಥ್ ಶೆಟ್ಟಿಯವರ ಸೇವೆಗೆ 7 ಮೆಡಲ್ ಗಳ ಗೌರವ ಸಂದಿತ್ತು. ಏಕನಾಥ್ ಶೆಟ್ಟಿಯವರ ಪತ್ನಿ ಜಯಂತಿ ಶೆಟ್ಟಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಮಗಳಾದ ಆಶಿತಾ ಶೆಟ್ಟಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಎಂಟ್ರಿಯಾಗಿದ್ದು, ಮಗ ಅಕ್ಷಯ್ ವಿದ್ಯಾರ್ಥಿಯಾಗಿದ್ದಾರೆ.ಇದೀಗ ಎಂಟು ವರ್ಷದ ಬಳಿಕ ವಿಮಾನದ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ಮಾಧ್ಯಮಗಳ ವರದಿಯ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ. ಸೇನೆಯಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಕುಟುಂಬದವರಿಗೆ ಬಂದಿಲ್ಲವೆಂದು ಸುದ್ದಿಗೆ ಜಯಂತಿ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

p>

LEAVE A REPLY

Please enter your comment!
Please enter your name here