ರಾಮ ಮಂದಿರದ ಬಗ್ಗೆ ಜನರ ಸ್ಪಂದನೆ, ಸಂಭ್ರಮ ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ಅಯೋಮಯ ಮಾಡಿದೆ: ಪ್ರತಾಪಸಿಂಹ ನಾಯಕ್

0

ಬೆಳ್ತಂಗಡಿ: ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ದೇಗುಲ ನಿರ್ಮಾಣವಾಗಿದ್ದು ಜ.22 ರ ಶ್ರೀರಾಮ ಪ್ರತಿಷ್ಠೆಯ ಸುವರ್ಣ ಕ್ಷಣಕ್ಕಾಗಿ ಸಂಪೂರ್ಣ ವಿಶ್ವವೇ ಸಡಗರ, ಸಂಭ್ರಮ,‌ ಕಾತರ, ಕುತೂಹಲದಿಂದ ಕಾಯುತ್ತಿದೆ.

ಹೀಗಿರುವಾಗ ಕಾಂಗ್ರೆಸ್ ಪಕ್ಷ ಮಾತ್ರ ತುಷ್ಟೀಕರಣದ ತನ್ನ ನೀತಿಗೆ ಬಲವಾಗಿ ಅಂಟಿಕೊಂಡಿರುವುದು ಮಾತ್ರ ವಿಪರ್ಯಾಸ‌ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.

ರಾಮ ಮಂದಿರದ ಬಗ್ಗೆ ಜನರ ಸ್ಪಂದನೆ, ಸಂಭ್ರಮ ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ಅಯೋಮಯಮಾಡಿದೆ.ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದವರು, ಮಂದಿರ ಆಗಬಾರದು ಎಂದು ಪ್ರಯತ್ನಪಟ್ಟವರು ಇಂದು ಹೌಹಾರಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಮ ಭಕ್ತರ ಮೇಲಿನ 31 ವರ್ಷ ಹಳೆಯದಾದ ಪ್ರಕರಣವನ್ನು ಈಗ ಕೆದಕಿ ಸಂಭ್ರಮಕ್ಕೆ ಅಡ್ಡಿ ಮಾಡುತ್ತಿರುವುದು ಇದಕ್ಕೆ ಸಾಕ್ಷಿ.ಗೃಹ ಸಚಿವರು, ಹಳೆಯ ಕೇಸುಗಳನ್ನು ಕ್ಲೀಯರ್ ಮಾಡುತ್ತಿದ್ದೇವೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ.ಹಾಗಿದ್ದರೆ ಅಂದು ಕೆ.ಜೆ ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ದೊಂಬಿ ನಡೆಸಿ, ಠಾಣೆಗೆ ಬೆಂಕಿ‌ಹಚ್ಚಿದ ಆರೋಪಿಗಳನ್ನು ಈಗೇಕೆ ಬಂಧಿಸುತ್ತಿಲ್ಲ ? ಚಿಕಮಗಳೂರಿನ ದತ್ತಪೀಠದ ಹೋರಾಟಗಾರರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಸರಕಾರ ಬೆದರಿಕೆ ಹಾಕಿದೆ.ಒಟ್ಟಾರೆ ರಾಮ ಮಂದಿರದ ಉದ್ಘಾಟನೆ ಕಾಂಗ್ರೆಸಿಗರನ್ನು ತಡಬಡಾಯಿದೆ, ಕಂಗೆಡಿಸಿದೆ ಎನ್ನುವುದು ಸ್ಪಷ್ಟ.

ಇನ್ನೊಂದೆಡೆ ಬಿ.ಕೆ.ಹರಿಪ್ರಸಾದ್ ಅವರು ಗೋಧ್ರಾದಲ್ಲಿ ಆದಂತೆ ಆಗಬಹುದು ಎಂಬ ಹೇಳಿಕೆ ನೀಡಿದ್ದಾರೆ.ಅವರ ಬಳಿ ಈ ಬಗ್ಗೆ ಮಾಹಿತಿಗಳಿದ್ದಲ್ಲಿ ಸರಕಾರದ ಮುಖ್ಯಸ್ಥರಿಗೆ ತಿಳಿಸಬಹುದಲ್ಲಾ? ಅಂತಹವರನ್ನು ಬಂಧಿಸಬಹುದಲ್ವಾ? ಅದು ಬಿಟ್ಟು ಹೆದರಿಸುವುದರ ಹಿಂದಿನ ಷಡ್ಯಂತ್ರವೇನು? ಅದಲ್ಲದೆ ಹಿಂದುರಾಷ್ಟ್ರದ ಕುರಿತು ಸಿದ್ಧರಾಮಯ್ಯನವರ ಮಗನ ಮಾತು, ಸಚಿವ ಆಂಜನೇಯ ಅವರ ಹೇಳಿಕೆ, ರಾಮ ಮಂತ್ರಾಕ್ಷತೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹಗುರ ಮಾತುಗಳನ್ನು ಜನ ಗಮನಿಸಿದ್ದಾರೆ.ಇದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ 10,000 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿರುವುದು ತುಷ್ಟೀಕರಣದ ಪರಾಕಾಷ್ಠೆಯಾಗಿದೆ.ರಾಜ್ಯದಲ್ಲಿ ಅಲ್ಪಸಂಖ್ಯಾತರು ಮಾತ್ರ ಪ್ರಜೆಗಳೇ? ಜಾತ್ಯತೀತತೆ ಎಂದರೆ ಒಂದು ಕೋಮನ್ನು ಮಾತ್ರ ಓಲೈಸುವುದೇ? ಇದಕ್ಕೆ ಸರಕಾರ ಉತ್ತರಿಸಬೇಕು ಎಂದು ಪ್ರತಾಪಸಿಂಹ ನಾಯಕ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here