ಉಜಿರೆ: ಗ್ರಾಮೀಣ ಪ್ರದೇಶದಲ್ಲಿ ನಗರಗಳಿಗೆ ಸೀಮಿತವಾದ ಆರೋಗ್ಯ ಸೇವೆಯನ್ನು ಉಜಿರೆಯ ಬೆನಕ ಆಸ್ಪತ್ರೆ ನೀಡುತ್ತಿದೆ ಎಂದು ಧರ್ಮಸ್ಥಳ ಕನ್ಯಾಡಿ ರಾಮಕ್ಷೇತ್ರದ ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ಲಾಸಿದರು.
ಶ್ರೀ ಸ್ವಾಮೀಜಿಯವರು ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನದ ಸಾಮರ್ಥ್ಯ ಹೊಂದಿರುವ ಫಿಲಿಪ್ಸ್ ಅಫಿನಿಟಿ-70 ಅಲ್ಟ್ರಾ ಸೌಂಡ್ ಸೇವೆಯನ್ನು ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ದೀಪ ಪ್ರಜ್ವಲನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡುತ್ತಿದ್ದರು.
ಅವರು ಮಾತನಾಡುತ್ತಾ ಆರೋಗ್ಯ ಸೇವೆಯಲ್ಲಿ ರೋಗನಿರ್ಣಯ ಬಹುಮುಖ್ಯ.ಈ ನಿಟ್ಟಿನಲ್ಲಿ ಬೆನಕ ಆಸ್ಪತ್ರೆಯ ಅತ್ಯಾಧುನಿಕ ಸೇವೆಯು ಬೆಳ್ತಂಗಡಿ ತಾಲೂಕಿಗೆ ದೊಡ್ಡ ಕೊಡುಗೆ ಎಂದು ಅಭಿನಂದಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ರೇಡಿಯೋಲಜಿಸ್ಟ್ ಡಾ.ಚಿದಾನಂದ ಅವರು ಮಾತನಾಡುತ್ತಾ ಹಲವು ವಿಶೇಷತೆಗಳ ಅಗತ್ಯತೆಗಳಿಗೆ ಸರಿಹೊಂದುವಂತೆ ಅನನ್ಯವಾಗಿ ವಿನ್ಯಾಸಗೊಳಿಸಲಾಗಿರುವ ಈ ತಂತ್ರಜ್ಞಾನ ಬಹುಮುಖ, ಕೈಗೆಟಕುವ, ಬಳಸಲು ಸುಲಭವಾದ ಹಾಗೂ ನಿಖರವಾಗಿ ರೋಗನಿರ್ಣಯ ಮಾಡಲು ಸಹಾಯಕವಾಗಿದೆ.ಬೆಳ್ತಂಗಡಿ ತಾಲೂಕಿನಲ್ಲಿ ಮೊತ್ತಮೊದಲ ಬಾರಿಗೆ ಒದಗಿಸಲಾದ ಈ ಸೇವೆ ತಾಲೂಕಿನ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಹೆಜ್ಜೆ ಎಂದು ಅಭಿನಂದಿಸಿದರು.
ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ಅಂಗಾಂಶಗಳ ಅಂಗಗಳ ಅಸಾಮಾನ್ಯ ಭಾಗವನ್ನು ಮತ್ತು ದೇಹದ ಇತರ ರಚನೆಯನ್ನು ಈ ಯಂತ್ರದ ಮೂಲಕ ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ.ಗುಣಮಟ್ಟದ ಆರೋಗ್ಯ ಸೇವೆಯನ್ನು ಕೊಡಮಾಡುವ ಆಶಯಕ್ಕೆ ಅನುಗುಣವಾಗಿ ದಕ್ಷ ಹಾಗೂ ಆಧುನಿಕ ಇಮೇಜಿಂಗ್ ಸಾಮರ್ಥ್ಯದ ಅಲ್ಟ್ರಾಸೌಂಡ್ ಸೇವೆ ಒದಗಿಸಲಿದ್ದೇವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಯೋಧ್ಯೆಯ ಶ್ರೀ ಕೇಶವಜೀ ಮಹರಾಜ್ ಅವರು ಶುಭಹಾರೈಸಿದರು. ಕಳೆದ 15 ವರ್ಷಗಳಿಂದ ಪ್ರತಿ ರವಿವಾರ ಬೆನಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೇವೆಯನ್ನು ನೀಡುತ್ತಿರುವ ಡಾ.ಚಿದಾನಂದ ಮೂರ್ತಿ ಅವರನ್ನು ಶ್ರೀ ಸ್ವಾಮೀಜಿಯವರು ಶಾಲು ಹೊದೆಸಿ ಪಲಪುಷ್ಪಗಳನ್ನಿತ್ತು ಅಭಿನಂದಿಸಿದರು.
ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಜಿ.ಭಟ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕೊನೆಗೆ ಡಾ.ಭಾರತಿ.ಜಿ.ಕೆ ವಂದಿಸಿದರು.ಕಾರ್ಯಕ್ರಮದಲ್ಲಿ ಡಾ.ಗೋವಿಂದ ಕಿಶೋರ್, ಡಾ.ವಿನಯ ಕಿಶೋರ್, ಡಾ.ವಿಶ್ವವಿಜೇತ್, ಡಾ.ಅಂಕಿತಾ ಜಿ. ಭಟ್, ಸೀತಾರಾಮ ಭಟ್, ಕೃಷ್ಣಪ್ಪ ಗುಡಿಗಾರ್, ಮುರಳಿಕೃಷ್ಣ ಬೆಳಾಲ್, ಬೆನಕ ಆಸ್ಪತ್ರೆಯ ಮಖ್ಯ ಕಾರ್ಯನಿರ್ವಹಣಾಧಿಕಾರಿ ದೇವಸ್ಯ ಹಾಗೂ ಆಸ್ಪತ್ರೆಯ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.