ಬೆಳ್ತಂಗಡಿ: ಹೊಸ ವರ್ಷದ ಪಾರ್ಟಿಯಲ್ಲಿ ಯುವಕರ ನಡುವೆ ಗಲಾಟೆ ನಡೆದು ಯುವಕನೊಬ್ಬನ ಮೂಗನ್ನು ಕಚ್ಚಿ ತುಂಡರಿಸಿದ ಘಟನೆ ಪಿಲ್ಯದಲ್ಲಿ ನಡೆದಿದೆ.
ಡಿ.31ರಂದು ರಾತ್ರಿ ಹೊಸ ವರ್ಷದ ಪ್ರಯುಕ್ತ ಪಾರ್ಟಿ ಮಾಡುತ್ತಿದ್ದ ವೇಳೆ ಪಿಲ್ಯ ಗ್ರಾಮದ ಉಲ್ಪೆ ನಿವಾಸಿ ದೀಕ್ಷಿತ್ ಮತ್ತು ಮೂಲತಃ ಮೂಡಿಗೆರೆ ತಾಲೂಕಿನವನಾಗಿದ್ದು ಪ್ರಸ್ತುತ ಪಿಲ್ಯ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಯಿಂದ ಸ್ಥಳೀಯ ಅಂಗಡಿಗೆ ಕೆಲಸಕ್ಕೆ ಹೋಗುತ್ತಿರುವ ರಾಕೇಶ್ ನಡುವೆ ಮಾತಿಗೆ ಮಾತು ಬೆಳೆದಿದೆ.ಈ ವೇಳೆ ಪರಸ್ಪರ ಜಗಳ ನಡೆದಿದ್ದು ರಾಕೇಶ್ ಮದ್ಯದ ಅಮಲಿನಲ್ಲಿ ದೀಕ್ಷಿತ್‌ಗೆ ಹಲ್ಲೆ ನಡೆಸಿ ಆತನ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ.ಗಂಭೀರ ಗಾಯಗೊಂಡ ದೀಕ್ಷಿತ್ ಅವರನ್ನು ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.ಬಳಿಕ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ದೀಕ್ಷಿತ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.