ಧರ್ಮಸ್ಥಳ: ಅಕ್ರಮ ಮರಳು ಮಾಫಿಯಾಗಳ ಮೇಲೆ ಬೆಳ್ತಂಗಡಿ ಮತ್ತು ಧರ್ಮಸ್ಥಳ ಪೊಲೀಸರ ತಂಡ ಹಗಲು ರಾತ್ರಿ ಹದ್ದಿನ ಕಣ್ಣು ಇಟ್ಟು ಮರಳುಕಳ್ಳರಿಗೆ ಬಿಸಿಮುಟ್ಟಿಸಿ ಪ್ರಕರಣ ದಾಖಲಿಸುತ್ತಿದ್ದಾರೆ.ಮತ್ತೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ಮುಂದುವರಿಸಿ ನೆರಿಯ ಹೊಳೆಯಲ್ಲಿ ಅಕ್ರಮವಾಗಿ ಪಿಕಪ್ ವಾಹನಕ್ಕೆ ಮರಳು ತುಂಬಿಸುತ್ತಿದ್ದಾಗ ದಾಳಿ ಮಾಡಿ ಪಿಕಪ್ ಮತ್ತು ಮರಳು ವಶಪಡಿಸಿಕೊಂಡು ಆರೋಪಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕುದ್ರಾಯದ ನೆರಿಯ ಹೊಳೆಯಲ್ಲಿ ಡಿ.28 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಅಕ್ರಮವಾಗಿ ಸರಕಾರಕ್ಕೆ ಯಾವುದೇ ರಾಜ್ಯಸ್ವವನ್ನು ಪಾವತಿಸದೇ ಕಳ್ಳತನ ಮಾಡಿ ಮರಳನ್ನು ತೆಗೆದು KA-12-A-9734 ಸಂಖ್ಯೆಯ ಪಿಕಪ್ ವಾಹನದಲ್ಲಿ ತುಂಬಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಸಮರ್ಥ ಗಾಣಿಗೇರ ಮತ್ತು ಸಿಬ್ಬಂದಿಗಳ ತಂಡ ದಾಳಿ ಮಾಡಿ ಮರಳು ಮತ್ತು ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಮರಳಿನ ಅಂದಾಜು ಮೌಲ್ಯ 2,000 ರೂಪಾಯಿ ಹಾಗೂ ಪಿಕಪ್ ನ ಅಂದಾಜು ಮೌಲ್ಯ 2,25,000 ರೂಪಾಯಿ ಆಗಿದ್ದು. ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 2,27,000 ರೂಪಾಯಿ ಆಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕೆರೆಕೋಡಿ ನಿವಾಸಿ ನಾರಾಯಣ ಸಫಲ್ಯ ಮಗ ಮಂಜು(32) ವಿರುದ್ಧ ಪ್ರಕರಣ ದಾಖಲಾಗಿದೆ.