ಶಿರ್ಲಾಲು: ‘ಸಾವಿರಾರು ವರ್ಷ ಕಾಲ ಹೋರಾಟ ಮಾಡಿರುವ ಅಯೋಧ್ಯೆಯ ಶ್ರೀ ರಾಮನ ಮಂದಿರ ಎದ್ದು ನಿಲ್ಲುವ ಸಂದರ್ಭದಲ್ಲಿಯೇ ಶಿರ್ಲಾಲಿನ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವ ನಡೆದಿದೆ.ಹಾಗಾಗಿ ಈ ವರ್ಷ ಹಿಂದೂ ಸಮಾಜ ಪುನಶ್ಚೇತನಗೊಂಡಿರುವ ವರ್ಷ.ಭಕ್ತಿ ಭಾವನೆಯ ಮಧ್ಯೆ ದೇವಸ್ಥಾನ ಬೆಳಗುತ್ತದೆ ಎಂಬುದಕ್ಕೆ ಶಿರ್ಲಾಲು ದೇವಸ್ಥಾನ ನಿದರ್ಶನ’ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಡಿ.28ರಂದು ರಾತ್ರಿ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
‘ಬ್ರಹ್ಮಕಲಶದ ಸೊಬಗು ನೋಡುವಾಗ ಎಲ್ಲರೂ ತನ್ನ ಮನಸ್ಸಿನ ಭಾವನೆ, ಯೋಚನೆ ಹೊರಗಿಟ್ಟು, ತನ್ನ ಎಲ್ಲಾ ಸಮಯ ಶಕ್ತಿ ಪರಿಶ್ರಮಗಳನ್ನು ಭಗವಂತನಿಗೆ ಅರ್ಪಣೆ ಮಾಡಿದ್ದಾರೆ. ಶಿವನಂತೆ ಆಗಿ ಶಿವನನ್ನು ಅರ್ಚನೆ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದೇವರಿಗಾಗಿ ಒಟ್ಟಾಗಿ ಕೆಲಸ ಮಾಡಿದಾಗ ತನ್ನ ಮನಸ್ಸಿನ ಕೋಪ, ವೈರತ್ವಗಳು ನಾಶವಾಗಿ ಒಗ್ಗಟ್ಟು ನಿರ್ಮಾಣವಾಗಲು ಸಾಧ್ಯ.ಮನಸ್ಸಿನಲ್ಲಿ ಕೊಳಕು ತುಂಬಿದಲ್ಲಿ ಶಾಂತಿ ಸಮಾಧಾನ ಸಿಗಲು ಸಾಧ್ಯವಿಲ್ಲ.ಹಾಗಾಗಿ ಮನದ ಕಲ್ಮಶ ಬಿಟ್ಟು ಭಕ್ತಿ ಭಾವನೆಯ ಮಧ್ಯೆ ದೇವಸ್ಥಾನಕ್ಕೆ ಬಂದಾಗ ದೇವರು ಪ್ರತಿಫಲ ನೀಡುವನು’ ಎಂದರು.
ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದ ಅರ್ಚಕ ಟಿ.ವಿ.ಶ್ರೀಧರ ರಾವ್ ಪೇಜಾವರ ಮಾತನಾಡಿ, ‘ಎಲ್ಲೋ ದಾರಿಯಲ್ಲಿ ಇದೆ ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಹೋಗುವುದಲ್ಲ. ಮನೆಯಿಂದ ಹೊರಡುವಾಗಲೇ ಸಂಕಲ್ಪ ಮಾಡಿ ದೇವಸ್ಥಾನಕ್ಕೆ ಬರಬೇಕು. ದೇವಸ್ಥಾನ ಆ ಗ್ರಾಮದ ಶ್ರದ್ಧಾ ಕೇಂದ್ರಗಳು ಆಗಿರುವುದು ಮಾತ್ರವಲ್ಲದೆ ಶಕ್ತಿ ಕೇಂದ್ರಗಳೂ ಆಗಿವೆ.ಗ್ರಾಮದ ದೇವಸ್ಥಾನ ಧಾರ್ಮಿಕ ಕೇಂದ್ರವಾಗಿರುವ ಜತೆಗೆ ಬಡವರ ಶಿಕ್ಷಣಕ್ಕೆ, ಅಸಕ್ತರಿಗೆ ನೆರವಾಗುವ ಸಾಮಾಜಿಕ ಕೆಲಸಗಳಿಗೂ ಒತ್ತು ನೀಡಲಿ ‘ ಎಂದು ಆಶಿಸಿದರು.
ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಚಿದಾನಂದ ಪೂಜಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಗನ್ನಾಥ್ ಶಿರ್ಲಾಲ್, ಸಂಜೀವ ಪೂಜಾರಿ ಕೊಡಂಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕರಂಬಾರು ಗುತ್ತು ಸುಧಿಶ್ ಹೆಗ್ಡೆ, ಉದ್ಯಮಿ ಶೀತಲ್ ಜೈನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಪಾರೆಂಕಿ, ಸೇವಾ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್ ಇದ್ದರು.ನಾರಾಯಣ ಮೂಲ್ಯ ಮಿತ್ತೊಟ್ಟು ಇವರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿರಾಜ್ ಕೆ ಕುಲ್ಯರೊಟ್ಟು ಸ್ವಾಗತಿಸಿದರು.ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸತೀಶ್ ಶಿರ್ಲಾಲು ವಂದಿಸಿದರು.