



ಬೆಳ್ತಂಗಡಿ: ಸಮಾಜದ ಎಲ್ಲಾ ಜನರು ಸಾಮಾಜಿಕವಾಗಿ ಒಗ್ಗಟ್ಟಾದಾಗ ಮಾತ್ರ ಸಂಘಕ್ಕೆ ಶಕ್ತಿ ತುಂಬಲು ಸಾಧ್ಯ.ಆದ್ದರಿಂದ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕೆಂದು ತಿಳಿಸಿದರು.ಸಂಘಟನೆ ಇದ್ದರೆ ಸಮಾಜದ ಎಲ್ಲಾ ಜನರಿಗೂ ಶಕ್ತಿ ಬಂದಂತೆ.ಈ ಮೂಲಕ ಸಂಘಟನೆಯ ಜತೆಗೂಡಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಪಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಅವರು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಮರಾಟಿ ಜನರನ್ನು ಮೇಲೆತ್ತಿ ಅವರ ಪ್ರತಿಭೆಗಳನ್ನು ಗುರುತಿಸಬೇಕು.ಅವರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಒಳ್ಳೆಯ ವಿಷಯವಾಗಿದೆ ಎಂದರು.
ಸಂಘವು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಸಮಾಜದ ಬೆಳವಣಿಗೆಗೆ ಆರ್ಥಿಕವಾಗಿಯೂ ಸದೃಢರಾಗಬೇಕಿದ್ದು ಸಮಾಜದ ಜನರೆಲ್ಲ ಒಟ್ಟು ಸೇರಿ ಸಂಘದ ಜೊತೆಗೆ ಸಮಾಜದ ಜನರನ್ನು ಸದೃಢಗೊಳಿಸಬೇಕು ಎಂದರು.ಮುಖ್ಯವಾಗಿ ಮಕ್ಕಳು ವಿದ್ಯಾವಂತರಾಗಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಆ ಸಮಾಜಕ್ಕೆ ದೊಡ್ಡ ಶಕ್ತಿ ದೊರಕಿದಂತೆ.ಮಕ್ಕಳ ಪ್ರತಿಭೆಗಳನ್ನು ಗುರುತಿಸಲು, ಪ್ರತಿಭೆ ಅನಾವರಣಗೊಳಿಸಲು ಇದು ಒಳ್ಳೆಯ ವೇದಿಕೆಯಾಗಿದ್ದು ಇಲ್ಲಿ ಪ್ರತಿಭೆಗಳನ್ನು ಗುರುತಿಸುವುದು ಸಮಾಜಕ್ಕೆ ಹೆಗ್ಗಳಿಕೆ ಅಲ್ಲದೆ ಇದು ಸಮಾಜದ ಕರ್ತವ್ಯವೂ ಹೌದು.ಈ ರೀತಿಯ ಉತ್ತಮ ಕೆಲಸಗಳಿಂದ ಸಂಘ ಬೆಳೆಯುವುದರ ಜೊತೆಗೆ ಸಮಾಜವನ್ನು ಬೆಳೆಸಲಿ ಎಂದು ಶುಭಹಾರೈಸಿದರು.
ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ಹಿಂದುಳಿದ ಸಮುದಾಯದ ಕಾರ್ಯಕ್ರಮಕ್ಕೆ ನಾವೆಲ್ಲರೂ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಾದ್ದದ್ದು ನಮ್ಮ ಕರ್ತವ್ಯ. ನಾವು ಸಂಘಟಿತರಾಗಬೇಕು ಆಗ ಮಾತ್ರ ಇತರ ವರ್ಗದರಿಗೆ ದೊರೆಯುವಂತ ಸ್ಥಾನಮಾನಗಳು ಮರಾಟಿ ಸಮುದಾಯಕ್ಕೂ ದೊರೆಯಲು ಸಾದ್ಯ.ಹಿಂದುಳಿದ ಸಮುದಾಯದ ಜನರನ್ನು ಮುಖ್ಯವಾಹಿನಿಗೆ ಕರೆತರುವುದಕ್ಕಾಗಿ ಮೀಸಲಾತಿ ಇದೆ. ಆದರೆ ಕೇವಲ ಬೆರೆಳೆಣಿಕೆಯಷ್ಟು ಜನರು ಮಾತ್ರ ಮೀಸಲಾತಿಯ ಪ್ರಯೋಜನ ಪಡೆಯುತ್ತಿದ್ದಾರೆ.ಸಮಾಜದಲ್ಲಿ ಹಲವಾರು ಮಂದಿ ಸದೃಡರಾಗಿದ್ದರೂ ನಾವು ಸಂಘಟಿತರಾಗಿಲ್ಲದಿರುವುದು ಬೇಸರದ ವಿಷಯವಾಗಿದೆ.ಸಮಾಜದ ಪ್ರತೀ ವ್ಯಕ್ತಿಯ ಹಿಂದೆಯೂ ಸಮಾಜದ ಎಲ್ಲಾ ಜನರು ಒಟ್ಟಾಗಿ ನಿಲ್ಲಬೇಕು.ಆಗ ಮಾತ್ರ ಸಮಾಜ ಗಟ್ಟಿಯಾಗುತ್ತದೆ.ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವಲ್ಲಿ ನಾವೆಲ್ಲರೂ ಜೊತೆಯಾಗಿ ಸಂಘದ ಜೊತೆ ನಿಂತು ಸಹಕರಿಸಬೇಕಿದೆ ಎಂದು ತಿಳಿಸಿದರು.



ಸಂಘದ ವತಿಯಿಂದ ಮಂಗಳೂರು ಉಪವಿಭಾಗ-2 ರ ಅಬಕಾರಿ ಉಪ ಅಧೀಕ್ಷಕರಾಗಿ ಪದೋನ್ನತಿಗೊಂಡ ಸೌಮ್ಯಲತಾ ಸಂತೋಷ್ ಅವರನ್ನು ಗೌರವಾದರಗಳಿಂದ ಸನ್ಮಾನಿಸಲಾಯಿತು.
ಮರಾಟಿ ಪ್ರತಿಭಾ ಪುರಸ್ಕಾರ: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ತಾಲೂಕಿನಲ್ಲಿ ಶೇಕಡ 90ಕ್ಕಿಂತ ಅಧಿಕ ಅಂಕ ಪಡೆದ ಲಕ್ಷ್ಯ ಪಟ್ರಮೆ, ವರ್ಷಿಣಿ ಮುಂಡಾಜೆ, ಮದುಶ್ರೀ ಓಡಿಲ್ನಾಳ, ದಿವ್ಯ ಕುಮಾರಿ ಕಡಿರುದ್ಯಾವರ, ವರ್ಷಿಣಿ ವಿ.ಕೆ ವೇಣೂರು, ನಿಧಿಶಾ ಎನ್ ತಣ್ಣಿರುಪಂಥ ಅವರನ್ನು ಗೌರವಿಸಲಾಯಿತು.
ಸಮುದಾಯದವರಿಗಾಗಿ ಭಕ್ತಿಗೀತೆ, ಛದ್ಮವೇಷ, ಜನಪದ ಗೀತೆ ನೃತ್ಯ, ಹಾಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮರಾಟಿ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಸ್ವಾಮಿ ಪ್ರಸಾದ್ ಕನ್ಸ್ಟ್ರಕ್ಷನ್ಸ್ ನ ನಾಗೇಶ್, ಸಂಘದ ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕ ಬಡಕೊಡಿ, ಅಧ್ಯಕ್ಷ ಉಮೇಶ್ ನಾಯ್ಕ ಕೇಲ್ದಡ್ಕ, ಸಂಘದ ಗೌರವ ಸಲಹೆಗಾರರಾದ ಸಂತೋಷ್ ಕುಮಾರ್ ಲಾಯಿಲ, ಸಂಘದ ಉಪಾಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪದಾಧಿಕಾರಿಗಳಾದ
ಪ್ರಸಾದ್ ನಾಯ್ಕ ಸ್ವಾಗತಿಸಿ, ಸುರೇಶ್ ಹೆಚ್. ಎಲ್. ವಂದಿಸಿದರು. ಪ್ರಧಾನ ಕಾರ್ಯದರ್ಶಿ ತಾರನಾಥ್ ಓಡಿಲ್ನಾಳ ಕಾರ್ಯಕ್ರಮ ನಿರ್ವಹಿಸಿದರು.
ಬಾಕ್ಸ್…
ಸಮಾಜವನ್ನು ಒಟ್ಟುಗೂಡಿಸುವ ಕಾರ್ಯ
ಶಾಸಕ ಹರೀಶ್ ಪೂಂಜ ಮಾತನಾಡಿ, ತಾಲೂಕಿನ ಮರಾಟಿ ಸಮಾಜ ಸೇವಾ ಸಂಘವು ಸಮಾಜಮುಖಿ ಕೆಲಸಗಳನ್ನು ಮಾಡುವ ಜೊತೆಗೆ ಸಮಾಜವನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡುತ್ತಿದೆ. ಶಿವಾಜಿ ಮಹಾರಾಜರು ಹಿಂದವಿ ಸಾಮ್ರಾಜ್ಯವನ್ನು ಕಟ್ಟಿರುವ ರೀತಿ ತಾಲೂಕು, ಜಿಲ್ಲೆಗಳಲ್ಲಿ ಅಲ್ಲದೆ ಎಲ್ಲಾ ಕಡೆಗಳಲ್ಲಿಯೂ ಹಿಂದೂ ಸಮಾಜಕ್ಕೆ ಶಕ್ತಿಯನ್ನು ತುಂಬುವ ಕೆಲಸವನ್ನು ಮರಾಟಿ ಸಮಾಜ ಸೇವಾ ಸಂಘ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕನಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನೂ ಉತ್ತಮ ರೀತಿಯಲ್ಲಿ ನಡೆದು ನವ ಪ್ರತಿಭೆಗಳು ಸಮಾಜವನ್ನು ಬೆಳಗುವಂತಾಗಬೇಕು ಎಂದು ಶುಭ ಹಾರೈಸಿದರು.








