ಅರಣ್ಯವಾಸಿಗಳಿಗೆ ಸರಕಾರ ಯಾವುದೇ ತೊಂದರೆ ಕೊಡುವುದಿಲ್ಲ- ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ

0

ಬೆಳ್ತಂಗಡಿ: ರಾಜ್ಯದ ಮಲೆನಾಡು ಮತ್ತು ಕರಾವಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಹಲವಾರು ವರ್ಷಗಳಿಂದ ವಾಸವಿರುವ ಅರಣ್ಯವಾಸಿಗಳಿಗೆ ಸರಕಾರ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಪ್ರತಾಪಸಿಂಹ ನಾಯಕ್ ಅವರು ನಿಯಮ 330ರಡಿ ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಈಶ್ವರ ಖಂಡ್ರೆ, ರಾಜ್ಯದಲ್ಲಿ ಒಟ್ಟು ಎರಡು ಲಕ್ಷ ಎಕರೆ ಅರಣ್ಯ ಭೂಮಿ ಅತಿಕ್ರಮಣವಾಗಿದೆ.ಅದರಲ್ಲೂ ಬೆಂಗಳೂರಿನಲ್ಲಿಯೇ 2 ಸಾವಿರ ಎಕರೆ ಭೂಮಿ ಭೂಗಳ್ಳರ ಪಾಲಾಗಿದೆ.ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಕಳೆದ ವರ್ಷ 51 ಜನರು, ಈ ವರ್ಷ 43 ಜನರು ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಪರಿಸರವನ್ನು ಉಳಿಸಿಕೊಳ್ಳುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕಾಗಿ ಅರಣ್ಯ ಭೂಮಿ ಸಂರಕ್ಷಣೆ ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದರು.

ಯಾವುದೇ ಕಾರಣಕ್ಕೂ ಬಹಳ ವರ್ಷಗಳಿಂದ ಅದರಲ್ಲೂ 1978ರ ಪೂರ್ವದಿಂದಲೂ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ, ಕೃಷಿ ಮಾಡಿಕೊಂಡಿರುವ ಜನರನ್ನು ಸರಕಾರ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ ಬಡವರು, ಬುಡಕಟ್ಟು ಜನಾಂಗದವರು ಮತ್ತು ಅರಣ್ಯವಾಸಿಗಳಿಗೆ ಸರ್ಕಾರ ರಕ್ಷಣೆ ಕೊಡುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸಚಿವರು ಹೇಳಿದರು.

ಜಂಟಿ ಸಮೀಕ್ಷೆ ಆಗ್ರಹ: ರಾಜ್ಯದ ಮಲೆನಾಡು-ಕರಾವಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಮೇಲಿಂದ ಮೇಲೆ ಸಂಘರ್ಷಕ್ಕೆ ಕಾರಣವಾಗುತ್ತಿರುವ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಗಡಿಗಳನ್ನು ಜಂಟಿ ಸಮೀಕ್ಷೆ ಮಾಡಲಾಗುವುದು ಎಂದು ಖಂಡ್ರೆ ಹೇಳಿದರು.

ಕಳೆಂಜ ಪ್ರಕರಣ-ಯಥಾಸ್ಥಿತಿಗೆ ಸೂಚನೆ: ಅರಣ್ಯ ಮತ್ತು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಭೂ ಸಮೀಕ್ಷೆ ಸಂಬಂಧ ಬೆಳ್ತಂಗಡಿ ಶಾಸಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ತೀವ್ರ ಸಂಘರ್ಷ ಏರ್ಪಟ್ಟು ಸುದ್ದಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ಅ.6ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅರಣ್ಯ ಇಲಾಖೆ ಭೂಮಿ ಉಳಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಅಲ್ಲಿ ಮನೆ ಕಟ್ಟುವ ಕುಟುಂಬದ ಕ್ರಮವನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡೆಯಲು ಹೋದಾಗ ಶಾಸಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ಈ ಘರ್ಷಣೆ ನಡೆದಿದೆ.ಇದು ದುರದೃಷ್ಟಕರ ಎಂದು ಖಂಡ್ರೆ ವಿಷಾದಿಸಿದರು.

ವಿಷಯದ ಪರವಾಗಿ ಮಾತನಾಡಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವ ಜನಪ್ರತಿನಿಧಿಗಳನ್ನು ಅಧಿಕಾರಿಗಳು ಈ ರೀತಿ ನಡೆಸಿಕೊಂಡರೆ ಕೆಲಸ ಮಾಡುವುದು ಹೇಗೆ? ಎಂದು ಪ್ರಶ್ನಿಸಿದರು.ಇದಕ್ಕೆ ಧ್ವನಿಗೂಡಿಸಿದ ಭಾರತಿ ಶೆಟ್ಟಿ, ಕಳೆಂಜ ಪ್ರಕರಣದಲ್ಲಿ ದರ್ಪ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here