ಉಜಿರೆ: ರಕ್ತದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ.ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಗತ್ಯವುಳ್ಳವರಿಗೆ ನಾವು ನೀಡುವ ರಕ್ತದಾನ ಜೀವದಾನ ನೀಡಿದಂತೆ.ಅದರ ಪುಣ್ಯ ಫಲ ನಮಗೂ,ನಮ್ಮ ಪೀಳಿಗೆಗೂ ಲಭಿಸುವುದು.ನಾವು ನೀಡುವ ರಕ್ತದಾನ ಇನ್ನೊಬ್ಬರ ಜೀವ ರಕ್ಷಣೆಗೆ ನೆರವಾಗುವುದು ಎಂದು ಶ್ರೀ ಕ್ಷೇತ್ರ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರು ಪ್ಪಾಡಿ ಹೇಳಿದರು.ಅವರು ಡಿ.3ರಂದು ಸೌತಡ್ಕ ಸೇವಾಧಾಮ ಪುನಸ್ಚೇತನ ಕೇಂದ್ರದ 5ನೇ ವಾರ್ಷಿಕೋತ್ಸವ ಪ್ರಯುಕ್ತ ರೋಟರಿ ಸೇವಾಭಾರತಿ ಜೀವರಕ್ಷಕ್ ಯೋಜನೆ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮಂಗಳೂರಿನ ವೆನ್ ಲಾಕ್ ಜಿಲ್ಲಾ ಸರ್ಕಾರೀ ಆಸ್ಪತ್ರೆಯ ರಕ್ತನಿಧಿ ವಿಭಾಗದ ಸಹಕಾರದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಸೇವಾಭಾರತಿಯ ಸಂಯೋಜಕ ಶ್ರೀಧರ್ ಕೆ.ವಿ. ಪ್ರಸ್ತಾವಿಸಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪನ್ನಗೊಳ್ಳುವುದು. ಇದರಿಂದ ಹೃದಯಾಘಾತವಾಗುವ ಸಂಭವ ಕಡಿಮೆ.ರಕ್ತದಾನ ಮಾಡುವುದರಿಂದ ಇತರರ ಜೀವ ಉಳಿಸಿದಂತಾಗುವುದು.ಆರೋಗ್ಯವಂತರಾಗಿರುವ 18 ರಿಂದ 55 ವರ್ಷ ಪ್ರಾಯದವರೂ ರಕ್ತದಾನ ಮಾಡಿ ಇನ್ನೊಬ್ಬರ ಜೀವವನ್ನು ಉಳಿಸಬಹುದು ಎಂದರು. ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ ಅಧ್ಯಕ್ಷತೆ ವಹಿಸಿ ಶುಭ ಕೋರಿದರು.ವೇದಿಕೆಯಲ್ಲಿ ಉಜಿರೆ ಹವ್ಯಕ ವಲಯಾಧ್ಯಕ್ಷ ಶ್ಯಾಮ್ ಭಟ್ ಅತ್ತಾಜೆ, ಭಾರತೀಯ ಜೀವ ವಿಮ ನಿಗಮದ ಅಭಿವೃದ್ಧಿ ಅಧಿಕಾರಿ ಉದಯಶಂಕರ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಕೃಷ್ಣ ಭಟ್, ಕೊಕ್ಕಡದ ಆಡಳಿತ ವೈದ್ಯಾಧಿಕಾರಿ ಹಾಗು ದಂತ ವೈದ್ಯಾಧಿಕಾರಿ ಡಾ!ತುಷಾರ ಕುಮಾರಿ, ಶಿವಾಜಿ ಗ್ರೂಪ್ ಆಫ್ ಬೋಯ್ಸ್ ಅಧ್ಯಕ್ಷ ಕಿಶೋರ್, ಪಟ್ರಮೆ ಅನಾರು ವೀರಕೇಸರಿ ಅಧ್ಯಕ್ಷ ಮೋಹನ ಗೌಡ ಅಶ್ವತ್ತಡಿ ಮತ್ತು ಮಂಗಳೂರು ವೆನ್ ಲಾಕ್ ಜಿಲ್ಲಾ ಸರ್ಕಾರೀ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಕೀಯ ತಂಡ ಉಪಸ್ತಿತರಿದ್ದರು.
ಬೃಹತ್ ರಕ್ತದಾನ ಶಿಬಿರ ಆಯೋಜಿಸಲು ಸೇವಾಧಾಮ ಪುನಸ್ಚೇತನ ಕೇಂದ್ರದ ಜತೆಗೆ ರೋಟರಿ ಸೇವಾಭಾರತಿ ಜೀವರಕ್ಷಕ್ ಯೋಜನೆ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಉಜಿರೆ ವಲಯದ ಹವ್ಯಕ ಮಂಡಲ, ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್, ಕನ್ಯಾಡಿ ಫ್ರೆಂಡ್ಸ್ ಕ್ಲಬ್, ಪಟ್ರಮೆ ಅನಾರು ವೀರಕೇಸರಿ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕೊಕ್ಕಡ ಕೇಸರಿ ಗೆಳೆಯರ ಬಳಗ ಮತ್ತು ಕೊಕ್ಕಡ ಸಮುದಾಯ ಆ ರೋಗ್ಯ ಕೇಂದ್ರ ಸಹಭಾಗಿತ್ವ ನೀಡಿ ಸಹಕರಿಸಿದ್ದವು.
ಸೇವಾಭಾರತಿ ಫೀಲ್ಡ್ ಕೋ-ಓರ್ಡಿನೇಟರ್ ಶಶಾಂತ್ ಸ್ವಾಗತಿಸಿ,ನಿರೂಪಿಸಿದ ಕಾರ್ಯಕ್ರಮದಲ್ಲಿ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ವಂದಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು 81 ಯೂನಿಟ್ ರಕ್ತ ಸಂಗ್ರಹವಾಗಿದೆ ಎಂದು ಸೇವಾಭಾರತಿ ಕೋಶಾಧಿಕಾರಿ ಕೆ.ವಿನಾಯಕ ರಾವ್ ತಿಳಿಸಿ ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.