ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

0

ಲಾಯಿಲ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಲಾಯಿಲ ಇಲ್ಲಿಯ ವಾರ್ಷಿಕ ಕ್ರೀಡೋತ್ಸವವನ್ನು ನ.25ರಂದು ಶಾಲಾ ಆವರಣದಲ್ಲಿ ಬಹಳ ಅಭೂತಪೂರ್ವವಾಗಿ ಆಚರಿಸಲಾಯಿತು.

ಶಿಕ್ಷಕರ ಸೂಕ್ತ ತರಬೇತಿಗಳೊಂದಿಗೆ ಸಜ್ಜುಗೊಂಡ ವಿದ್ಯಾರ್ಥಿಗಳು ವಿವಿಧ ಕವಾಯತುಗಳ ಪ್ರದರ್ಶನದೊಂದಿಗೆ, ಶಾಲಾ ಬ್ಯಾಂಡಿನ ಜೊತೆಗೆ ಕೆಂಪು, ಹಳದಿ, ಹಸಿರು ಹಾಗೂ ನೀಲಿ ಬಣ್ಣದ ಸಮವಸ್ತ್ರಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ಪಥಸಂಚಲನದ ಮೂಲಕ ಸಾಗುತ್ತಾ, ಅತಿಥಿಗಳನ್ನು ಸ್ವಾಗತಿಸಿದರು.ಕ್ರೀಡಾಜ್ಯೋತಿಯ ಮೆರವಣಿಗೆಯು ಈ ದಿನಕ್ಕೊಂದು ವಿಶೇಷ ಮೆರುಗನ್ನು ತಂದಿತು. ಕಾರ್ಯಕ್ರಮವನ್ನು ಶ್ರೀಯುತ ಪ್ರಭಾಕರ್ ನಾರಾವಿ, ಪದವೀಧರ ಶಿಕ್ಷಕರ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರು ಇವರು ಉದ್ಘಾಟಿಸಿ, ತೀರ್ಪುಗಾರರಾದ ರಾಧಾಕೃಷ್ಣ ಮಚ್ಚಿನ ಮತ್ತು ಶ್ರೀಹರ್ಷಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ತದನಂತರ ನಡೆದ ಪ್ರತಿಭಾ ಪ್ರದರ್ಶನದಲ್ಲಿ ಆಯಾಯ ತಂಡಕ್ಕೆ ಸಂಬಂಧಿಸಿದಂತೆ ನಡೆದ ಅಮೋಘ ನೃತ್ಯ ಆಯಾಮಗಳು ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಹಿಡಿದ ಕೈಗನ್ನಡಿಯಾಗಿತ್ತು.ನಂತರ ದಿನವಿಡೀ ನಡೆದ ಆಟೋಟ ಸ್ಪರ್ಧೆಗಳಾದ ಓಟ, ರಿಲೇ,ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್, ಹಗ್ಗಜಗ್ಗಾಟ, ಗುಂಡೆಸೆತ ಪಂದ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ಕ್ರೀಡಾ ಸ್ಪೂರ್ತಿಯನ್ನು ಮೆರೆದರು.

ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ವರ್ನನ್ ಮೆಂಡೋನ್ಸಾ ಹಾಗೂ ರೂಪಲತಾ ಇವರು ನಿರೂಪಿಸಿ, ಸ್ವಾತಿ ಇವರು ಸ್ವಾಗತಿಸಿದರು.

ಕೊನೆಯದಾಗಿ ಸವಿತಾ ಇವರು ವಂದನಾರ್ಪಣೆಗೈದರು.ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ ಜಾರ್ಜ್ ,ಶಾಲಾ ದೈಹಿಕ ಶಿಕ್ಷಕರುಗಳಾದ ಶ್ರೀಯುತ ಅಜಿತ್ ಹಾಗೂ ಸುದರ್ಶನ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಶಿಕ್ಷಕ ಹಾಗೂ ಸಹ ಶಿಕ್ಷಕೇತರರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here