ಬೆಳ್ತಂಗಡಿ: ಸರಕಾರದ ಮಹತ್ವಾಕಾಂಕ್ಷೆಯ ಬೆಳೆ ಸಮೀಕ್ಷೆ ಬೆಳ್ತಂಗಡಿ ತಾಲೂಕಿನಲ್ಲಿ ಶೇ.92.94 ಪೂರ್ಣಗೊಂಡಿದೆ. ಕೃಷಿ ಇಲಾಖೆ ಸುಪರ್ದಿಯಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಕಾರದ ನಾನಾ ಯೋಜನೆಗಳ ಸವಲತ್ತು ಪಡೆಯಲು ನಿಖರ ಬೆಳೆಗಳನ್ನು, ಜಮೀನಿನ ಸರ್ವೆ ನಂಬರ್, ಮಾಲೀಕರ ಹೆಸರು, ಹಿಸ್ಸಾ ನಂಬರ್ ಇತ್ಯಾದಿ ನಮೂದಿಸಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಬೆಂಬಲ ಬೆಲೆ, ಬೆಳೆ ಸಾಲ, ಬೆಳೆ ವಿಮೆ, ಪ್ರಕೃತಿ ವಿಕೋಪದ ಸಮಯ ಪರಿಹಾರ ಪಡೆಯಲು ಇದು ಅನುಕೂಲ ಕಲ್ಪಿಸುತ್ತದೆ. ಇಲ್ಲಿನ ಮುಖ್ಯ ಬೆಳೆಗಳಾದ ಅಡಕೆ, ರಬ್ಬರ್, ತೆಂಗು, ಕಾಳುಮೆಣಸು, ಭತ್ತ, ಕೊಕ್ಕೋ ಮೊದಲಾದ ಬೆಳೆಗಳ ಸಮಗ್ರ ಸಮೀಕ್ಷೆ ನಡೆದಿದೆ. ಇದನ್ನು ಮೊಬೈಲ್ ಆಪ್ ಮೂಲಕ ಸ್ವತಃ ರೈತರೇ ಸಮೀಕ್ಷೆ ನಡೆಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ವತಃ ರೈತರಿಗೆ ಸಮೀಕ್ಷೆ ಮಾಡುವ ವ್ಯವಸ್ಥೆ ಇದ್ದರೂ ಹೆಚ್ಚಿನ ರೈತರು ಈ ಬಗ್ಗೆ ನಿರಾಸಕ್ತಿ ತೋರಿದ್ದಾರೆ. ಹೆಚ್ಚಿನ ರೈತರಿಗೆ ಈ ಯೋಜನೆಯ ಮಾಹಿತಿ, ಪ್ರಯೋಜನದ ಅರಿವಿಲ್ಲದಿರುವುದು ಇದಕ್ಕೆ ಕಾರಣವಾಗಿದೆ. ತಾಲೂಕಿನ ಹೆಚ್ಚಿನ ಭಾಗ ಗುಡ್ಡಗಾಡು ಪ್ರದೇಶ, ನೆಟ್ವರ್ಕ್ ಸಮಸ್ಯೆ ಇರುವ ಪರಿಸರವಾದ ಕಾರಣ ರೈತರಿಗೆ ಸ್ವತಃ ಸಮೀಕ್ಷೆ ನಡೆಸಲು ಅಡ್ಡಿ ಉಂಟಾಗಿತ್ತು. ರೈತರು ನಿರಾಸಕ್ತಿ ತೋರಿದ ಕಾರಣ ಇದಕ್ಕಾಗಿ ಪಿಆರ್‌ಗಳನ್ನು ತಾತ್ಕಾಲಿಕವಾಗಿ ನೇಮಿಸಿ ಅವರ ಮೂಲಕ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಪ್ರತಿ ಗ್ರಾ.ಪಂ.ಗೆ ಖಾಸಗಿ ಸಿಬ್ಬಂದಿ ನೇಮಿಸಿದ್ದು ಒಬ್ಬೊಬ್ಬರಿಗೆ ತಲಾ 800ರಿಂದ 1000 ಸರ್ವೆ ನಂಬರ್‌ಗಳ ಸಮೀಕ್ಷೆ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ಇವರಿಗೆ ಪ್ರತಿ ಸರ್ವೆ ನಂಬರ್ ಸಮೀಕ್ಷೆಗೆ ಆ ಸರ್ವೆ ನಂಬರ್‌ನಲ್ಲಿ ಒಂದು ಬೆಳೆ ನಮೂದು ಇದ್ದರೆ 10 ರೂ., ಎರಡು ಬೆಳೆ ಇದ್ದರೆ 15 ರೂ. ಹಾಗೂ ಮೂರು ಬೆಳೆಗೆ 20 ರೂ.ಗಳನ್ನು ಕೃಷಿ ಇಲಾಖೆ ಪಾವತಿಸಲಿದೆ.
ಬೆಳ್ತಂಗಡಿ ತಾಲೂಕಿನ ವಿವರ: ಬೆಳ್ತಂಗಡಿ ಹೋಬಳಿಯಲ್ಲಿ 69,607 ಸರ್ವೆ ನಂಬರ್‌ಗಳ ಪೈಕಿ 9,739 ಸರ್ವೆ ನಂಬರ್‌ಗಳು ನಾನಾ ಕಾರಣಗಳಿಂದ ಸಮೀಕ್ಷೆಗೆ ಸಿಗದವು ಎಂದು ಗುರುತಿಸಲಾಗಿದೆ. 1,945 ಸರ್ವೆ ನಂಬರ್‌ಗಳಲ್ಲಿ ರೈತರು ಸ್ವತಃ 54,003 ಸರ್ವೆ ನಂಬರ್‌ಗಳಲ್ಲಿ ನೇಮಿಸಲಾದ 52 ಪಿಆರ್‌ಗಳು ಸಮೀಕ್ಷೆ ನಡೆಸಿದ್ದಾರೆ. ಶೇ.93.45 ಬೆಳೆ ಸಮೀಕ್ಷೆ ನಡೆದಿದೆ. ಕೊಕ್ಕಡ ಹೋಬಳಿಯಲ್ಲಿ 60,358 ಸರ್ವೆ ನಂಬರ್‌ಗಳಲ್ಲಿ 8,515 ಸಮೀಕ್ಷೆಗೆ ಸಿಗದ ಸರ್ವೆ ನಂಬರ್‌ಗಳಿದ್ದು 1,885 ಸರ್ವೆ ನಂಬರ್‌ಗಳಲ್ಲಿ ರೈತರು ಸಮೀಕ್ಷೆ ನಡೆಸಿದರೆ 44,207 ಸರ್ವೆ ನಂಬರ್‌ಗಳಲ್ಲಿ 49 ಪಿಆರ್‌ಗಳಿಂದ ಸಮೀಕ್ಷೆ ನಡೆದಿದ್ದು, ಶೇ.88.91 ನಿರ್ವಹಣೆ ಕಂಡು ಬಂದಿದೆ. ವೇಣೂರು ಹೋಬಳಿಯಲ್ಲಿ 45,903 ಸರ್ವೆ ನಂಬರ್‌ಗಳ ಪೈಕಿ 3,834 ಸರ್ವೆಗೆ ಸಿಗದ ಸರ್ವೆ ನಂಬರ್‌ಗಳಿದ್ದು, 536 ರೈತರು ಸ್ವತಃ ಹಾಗೂ 40,382 ಸರ್ವೆ ನಂಬರ್‌ಗಳಲ್ಲಿ 37 ಪಿಆರ್‌ಗಳು ಸಮೀಕ್ಷೆ ನಡೆಸಿ ಶೇ.97.19 ಪ್ರಗತಿ ಸಾಧಿಸಲಾಗಿದೆ.
ಬೆಳೆ ಸಮಿಕ್ಷೆಯಲ್ಲಿ ಬೆಳೆ, ಸರ್ವೆ ನಂಬರ್, ಹೆಸರು, ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆ ಇತ್ಯಾದಿ ನಮೂದಿಸುವಾಗ ಕಣ್ತಪ್ಪಿನಿಂದ, ತಾಂತ್ರಿಕ ಎಡುವಟ್ಟುಗಳಿಂದ ತಪ್ಪುಗಳು ಉಂಟಾಗಿರುವ ಸಾಧ್ಯತೆ ಇದೆ. ತಪ್ಪುಗಳು ಉಂಟಾಗಿದ್ದಲ್ಲಿ ಅಂತಹ ರೈತರಿಗೆ ಸಮಸ್ಯೆಗಳು ಎದುರಾಗಲಿವೆ. ಈ ಹಿಂದಿನ ಬೆಳೆ ಸಮೀಕ್ಷೆಗಳಲ್ಲಿ ಅಡಕೆ ಬೆಳೆ ನಮೂದಾಗಿದ್ದು ಈ ಬಾರಿ ರಬ್ಬರ್ ಅಥವಾ ಬೇರೆ ಬೆಳೆ ನಮೂದಾಗಿದ್ದರೆ ಅಂತಹ ಕೃಷಿಕರಿಗೆ ಸರಕಾರದಿಂದ ಸಹಾಯಧನ ಸಿಗಲು ಸಾಧ್ಯವಿಲ್ಲ. ಕೆಲವು ವರ್ಷಗಳಿಂದ ತಾಲೂಕಿನಲ್ಲಿ ಇಂತಹ ಸಮಸ್ಯೆ ಕಂಡು ಬಂದಿದ್ದು, ಹಲವರು ಬೆಳೆ ವಿಮೆ ಯೋಜನೆಯಿಂದ ವಂಚಿತರಾಗಿ ನಾನಾ ಇಲಾಖೆಗಳ ಕದ ತಟ್ಟುತ್ತಿರುವುದು ಮುಂದುವರಿದಿದೆ. ಮತ್ತೆ ಇಂತಹ ಎಡವಟ್ಟುಗಳು ಉಂಟಾಗಿದ್ದಲ್ಲಿ ಸಮೀಕ್ಷೆ ಅಪೂರ್ಣವಾಗುವ ಸಾಧ್ಯತೆ ಇದೆ. ಅಡಕೆ, ತೆಂಗು, ರಬ್ಬರ್ ದೀರ್ಘಾವಧಿ ಬೆಳೆಗಳಾಗಿದ್ದು, ಇಂತಹ ಕೃಷಿ ಭೂಮಿಯಲ್ಲಿ ಪ್ರತಿವರ್ಷ ಬೆಳೆ ಸಮೀಕ್ಷೆ ನಡೆಸುವ ಅಗತ್ಯವಿಲ್ಲ ಎಂಬ ಆಗ್ರಹ ರೈತರಿಂದ ಕೇಳಿಬರುತ್ತಿದೆ. ದೀರ್ಘಾವಧಿ ಬೆಳೆಗಳಲ್ಲಿ ಹಲವಾರು ವರ್ಷ ಯಾವುದೇ ಕೃಷಿ ಬದಲಾವಣೆ ಆಗುವುದಿಲ್ಲ. ಅಲ್ಲದೆ ಈ ಬೆಳೆ ಸಮೀಕ್ಷೆ ಸರಿಯಾದ ತಾಂತ್ರಿಕ ಮಾಹಿತಿ ಇಲ್ಲದ ಕಾರಣದಿಂದ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಅಲ್ಪಾವಧಿ ಕೃಷಿ ಭೂಮಿ ಹಾಗೂ ಬೆಳೆಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಉಳಿದಂತೆ ದೀರ್ಘಾವಧಿ ಬೆಳೆಗಳಿಗೆ ಐದು ಅಥವಾ ಹತ್ತು ವರ್ಷಗಳಿಗೊಮ್ಮೆ ಬೆಳೆ ಸಮೀಕ್ಷೆ ನಡೆಸುವುದು ಉತ್ತಮ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.