ಕೋರಂ ಕೊರತೆ-ಲಾಯಿಲ ಗ್ರಾ.ಪಂ ಸಾಮಾನ್ಯ ಸಭೆ ರದ್ದು- ಬಿಜೆಪಿ ಬೆಂಬಲಿತ 15 ಸದಸ್ಯರಲ್ಲಿ 12 ಮಂದಿ ಗೈರು

0

ಬೆಳ್ತಂಗಡಿ: ಕೋರಂ ಕೊರತೆಯಿಂದ ಲಾಯಿಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ರದ್ದುಗೊಂಡ ಘಟನೆ ನ.22 ರಂದು ನಡೆದಿದೆ.

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 20 ಸದಸ್ಯರುಗಳಿದ್ದು ಅದರಲ್ಲಿ 15 ಮಂದಿ ಬಿಜೆಪಿ ಬೆಂಬಲಿತ 3 ಮಂದಿ ಎಸ್.ಡಿ.ಪಿ.ಐ ಬೆಂಬಲಿತ, ಒಬ್ಬರು ಕಾಂಗ್ರೆಸ್ ಬೆಂಬಲಿತ ಹಾಗೂ ಒಬ್ಬರು ಪಕ್ಷೇತರ ಸದಸ್ಯರುಗಳಿದ್ದು ಅದರಲ್ಲಿ ಬಿಜೆಪಿ ಬೆಂಬಲಿತ 12 ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು.ಅಧ್ಯಕ್ಷರು ನಿಗದಿತ ಸಮಯಕ್ಕಿಂತ ಸುಮಾರು 1 ಗಂಟೆ ಕಾದರೂ ಸಭೆಗೆ ಸದಸ್ಯರು ಬಾರದೇ ಇದುದ್ದರಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು.

ಈ ವೇಳೆ ಅಸಾಮಾಧಾನ ವ್ಯಕ್ತಪಡಿಸಿದ ಸದಸ್ಯ ಪ್ರಸಾದ್ ಶೆಟ್ಟಿಯವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಹಲವಾರು ಪ್ರಶಸ್ತಿಗಳ ಮೂಲಕ ಐಎಸ್ಒ ಮಾನ್ಯತೆ ಪಡೆದ ಜಿಲ್ಲೆಯ ದೊಡ್ಡ ಪಂಚಾಯತ್ ಗಲ್ಲೊಂದಾದ ಲಾಯಿಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಸದಸ್ಯರುಗಳ ಗೈರು ಹಾಜರಿಯಿಂದ ಮುಂದೂಡುವುದು ಬೇಸರದ ವಿಚಾರವಾಗಿದೆ.ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ಧೇಶದಿಂದ ಪಂಚಾಯತ್ ಸದಸ್ಯರುಗಳನ್ನಾಗಿ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಅವರ ನಂಬಿಕೆಗೆ ನಾವು ದ್ರೋಹ ಮಾಡಿದಂತೆ ಆಗುತ್ತದೆ.ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕ ಅರ್ಜಿ ಸೇರಿದಂತೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿರುತ್ತದೆ.ಈ ರೀತಿ ಕೋರಂ ಸಮಸ್ಯೆಯಿಂದ ಸಾಮಾನ್ಯ ಸಭೆ ರದ್ದುಗೊಂಡರೆ ಅಥವಾ ಮುಂದೂಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ಅದಲ್ಲದೇ ಆಡಳಿತ ಮಂಡಳಿಯ 15 ಸದಸ್ಯರುಗಳ ಪೈಕಿ 12 ಸದಸ್ಯರು ಗೈರು ಹಾಜರಾಗಿರುವುದು ಅವರೊಳಗಿನ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.

ಸಭೆಯಲ್ಲಿ ಅಧ್ಯಕ್ಷೆ ಜಯಂತಿ ಎಂ.ಕೆ. ಪಿಡಿಒ ಶ್ರೀನಿವಾಸ ಡಿ.ಪಿ, ಸದಸ್ಯರುಗಳಾದ ದಿನೇಶ್ ಶೆಟ್ಟಿ, ರೇವತಿ, ಮರಿಯಮ್ಮ, ಸವಿತಾ ಶೆಟ್ಟಿ, ಸಾರಮ್ಮ, ಸಲೀಂ , ಲೆಕ್ಕ ಸಹಾಯಕಿ ಸುಪ್ರೀತಾ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here