ಶಿಬಾಜೆಯ ದಲಿತ ಯುವಕ ಶ್ರೀಧರ ಹತ್ಯೆ ಪ್ರಕರಣ-ಸಿಐಡಿಗೆ ಒಪ್ಪಿಸಿದ ರಾಜ್ಯ ಸರಕಾರ: ದ.ಸಂ.ಸ. ಹರ್ಷ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: 2022ರ ಡಿ.17 ರಂದು ಶಿಬಾಜೆ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ದಲಿತ ಯುವಕ ಶ್ರೀಧರ ಅವರ ಹತ್ಯೆಯ ಪ್ರಕರಣವನ್ನುರಾಜ್ಯ ಸರಕಾರ ಸಿ.ಐ.ಡಿ ಗೆ ಒಪ್ಪಿಸಿರುವುದು ಹರ್ಷ ತಂದಿದೆ ಎಂದು ದಲಿತ ಸಂಘಟನೆಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಹೇಳಿದರು.ಅವರು ಅ.30ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹತ್ಯೆಯ ತನಿಖೆಯನ್ನು ತನಿಖಾಧಿಕಾರಿಯಾದ ಬಂಟ್ವಾಳ ಡಿ.ವೈ.ಎಸ್.ಪಿ ಪ್ರತಾಪ್‌ ಸಿಂಗ್ ತೋರಟ್ ರವರು ಕೈಗೆತ್ತಿಕೊಂಡಿದ್ದರು.ಪ್ರಾರಂಭದಲ್ಲಿ ಶ್ರೀಧರನನ್ನು ಹತ್ಯೆ ನಡೆಸಿದ ಆರೋಪಿಗಳು ಬಂಟ್ವಾಳ ಡಿ.ವೈ.ಎಸ್.ಪಿ. ಕಚೇರಿಗೆ ಆಗಮಿಸಿದ್ದು ಡಿ.ವೈ.ಎಸ್.ಪಿ ಆರೋಪಿಗಳನ್ನು ಬಂಧಿಸುವ ಬದಲಾಗಿ ಅವರ ರಕ್ಷಣಿಗೆ ಬೆಂಗಾವಲಾಗಿ ನಿಂತಿದ್ದರು. ಮೃತ ಶರೀರದ ಮರಣೋತ್ತರ ವರದಿಯಲ್ಲಿ ದೇಹದ ಮೇಲೆ 13 ಗಾಯಗಳಿದ್ದು ತಲೆಗೆ ಆಗಿರುವ ಆಳವಾದ ಗಾಯದಿಂದಾಗಿ ಸತ್ತಿದ್ದಾನೆ ಎಂದು ಬರೆದಿದ್ದಾರೆ.ಹೊಟ್ಟೆಯಲ್ಲಿ ವಿಷದ ಅಂಶ ಸ್ವಲ್ಪ ಇದ್ದು ರಕ್ತಕ್ಕೆ, ಹೊಟ್ಟೆಗೆ, ಲಿವರ್‌ಗೆ, ದೇಹಕ್ಕೆ ಪಸರಿಸಿರುವುದಿಲ್ಲ. ವಿಷದಿಂದ ಆತ ಸತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಕೈಬಿಟ್ಟರುವುದು ಮಾತ್ರವಲ್ಲದೆ ಮರಣೋತ್ತರ ವರದಿಯಲ್ಲಿನ ಅಂಶವನ್ನು ಮರೆಮಾಚಿ, ಆತ ವಿಷ ಕುಡಿದು ಸತ್ತಿದ್ದಾನೆ ಎಂದು ನ್ಯಾಯಾಲಯಕ್ಕೆ ಸುಳ್ಳು ವರದಿಯನ್ನು ಸಲ್ಲಿಸಿರುತ್ತಾರೆ. ಈ ಬಗ್ಗೆ ನ್ಯಾಯಾಲಯ ಫೆ.7 ರಂದು ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿ ತನಿಖಾಧಿಕಾರಿ ಪ್ರತಾಪ್‌ ಸಿಂಗ್ ತೋರಟ್ ಯಾವ ರೀತಿ ತಪ್ಪು ಮಾಡಿದ್ದಾರೆ ಎಂದು ಪುಟ ಸಂಖ್ಯೆ 6ರಿಂದ 22ರವರೆಗೆ ವಿವರವಾದ ವರದಿ ಬರೆದು ಜಿಲ್ಲಾ ಪೊಲೀಸ್ ಅಧಿಕಾರಿಯವರಿಗೆ ಆದೇಶ ಕಳುಹಿಸಿರುತ್ತಾರೆ.

ನಂತರ ನಮ್ಮ ಒತ್ತಡಕ್ಕೆ ಮಣಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅವರು ಡಾ. ಗಾನಾ ಪಿ. ಕುಮಾ‌ರ್ ಇವರಿಗೆ ಇದರ ತನಿಖೆಯ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಆದರೆ ಇವರು ಸಹೋದ್ಯೋಗಿ ಪ್ರತಾಪ್‌ ಸಿಂಗ್ ಅವರನ್ನು ರಕ್ಷಿಸುವ ಸಲುವಾಗಿ ದೂರುದಾರ ಹರೀಶ್ ಮುಗೇರರಿಗೆ ಒತ್ತಡ ಹಾಕಿ ಕಿರುಕುಳ ನೀಡಿದ್ದರು ಎಂದು ಅಶೋಕ್ ಕೊಂಚಾಡಿ ಆರೋಪಿಸಿದರು. ಆರೋಪಿಗಳು ಅರಸಿನಮಕ್ಕಿಯಿಂದ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಶ್ರೀಧರನಿಗೆ ಹಲ್ಲೆ ನಡೆಸಿದ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರಿದ್ದಾರೆ.ಆದರೆ ರಾಜಕೀಯ ಒತ್ತಡಕ್ಕೆ ಒಳಗಾಗಿ ತನಿಖೆಯ ದಿಕ್ಕು ತಪ್ಪಿಸಿ ಆರೋಪಿಗಳಿಗೆ ಸುಲಭದಲ್ಲಿ ಜಾಮೀನು ದೊರೆಯುವಂತೆ ಸಹಕರಿಸಿದ್ದಾರೆ.

ಸಂಘಟನೆಗಳು ನಡೆಸಿದ ಕಾನೂನು ಮತ್ತು ಸಂಘಟನಾತ್ಮಕ ಹೋರಾಟದಿಂದಾಗಿ ಜಿಲ್ಲಾ ನ್ಯಾಯಾಲಯ ತನಿಖಾಧಿಕಾರಿ ಪ್ರತಾಪ್‌ಸಿಂಗ್ ತೋರಟ್‌ರವರು ದಲಿತ ದೌರ್ಜನ್ಯ ಪ್ರಕರಣದಲ್ಲಿ ಮಾಡಿದ ಕರ್ತವ್ಯಲೋಪವನ್ನು ಎತ್ತಿ ಹಿಡಿದಿದೆ. ದಲಿತ ಸಂಘಟನೆಯು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಸಿ.ಐ.ಡಿ ತನಿಖೆಗೆ ಒತ್ತಾಯಿಸಿತ್ತು. ಸಂಘಟನೆಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸದ್ರಿ ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ಆದೇಶಿಸಿರುತ್ತಾರೆ.

ದಲಿತ ಸಮುದಾಯದ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟು ದಲಿತ ಸಂಘಟನೆಯ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಹಾಗೂ ರಾಜ್ಯ ಸರಕಾರಕ್ಕೆ ಸಂಘಟನೆ ಅಭಿನಂದನೆ ಸಲ್ಲಿಸುತ್ತದೆ. ಹತ್ಯೆಯಾದ ಶ್ರೀಧರನ ಕುಟುಂಬದ ಜೊತೆ ನಿಂತು ನ್ಯಾಯಕ್ಕಾಗಿ ಶ್ರಮಿಸಿ ಪ್ರಕರಣವನ್ನು ಸರಕಾರದ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸಿರುವ ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಸಚಿವ ಗಂಗಾಧರ ಗೌಡ ಹಾಗೂ ಮಾಜಿ ರಾಜ್ಯ ಸಭಾ ಸದಸ್ಯ ಬಿ.ಇಬ್ರಾಹಿಂ ಇವರಿಗೆ ದ.ಸಂ.ಸ ಅಂಬೇಡ್ಕರ್‌ವಾದ ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತದೆ ಮತ್ತು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದಕ್ಕೆ ನಮ್ಮ ಸಂಘಟನೆ ಹರ್ಷ ವ್ಯಕ್ತಪಡಿಸುತ್ತದೆ ಎಂದು ಅಶೋಕ್ ಕೊಂಚಾಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಉಪಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ದ.ಸಂ.ಸ ಅಂಬೇಡ್ಕರ್ ವಾದ ಬೆಳ್ತಂಗಡಿ ತಾಲೂಕು ಸಮಿತಿ ಸಂಚಾಲಕರಾದ ರಮೇಶ್ ಆರ್, ಮುಖಂಡರಾದ ನೇಮಿರಾಜ್‌ ಕಿಲ್ಲೂರು, ರಾಮದಾಸ್ ಮೇರಮಜಲು ಮತ್ತು ವೆಂಕಣ್ಣ ಕೊಯ್ಯೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here