ಬೆಳಾಲು: ಯುವಶಕ್ತಿ ಒಟ್ಟುಗೂಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಇಲ್ಲಿಯ ಯುವಶಕ್ತಿ ಬಳಗ ಸಾಧಿಸಿ ತೋರಿಸಿದೆ.ಚಿತ್ತಾ ಎಂದರೆ ಮನಸ್ಸು, ಊರಿನ ಸಮಸ್ತರ ಮನಸ್ಸುಗಳು ಸೇರಿ ಈ ಚಿತ್ತಾರ ರೂಪಗೊಂಡಿದೆ.ಕೇವಲ ಒಂದು ಸಂಘಟನೆಯ ಅಭಿವೃದ್ಧಿ ಮಾತ್ರವಲ್ಲದೆ ಶಾಲೆಯ ಅಭಿವೃದ್ಧಿಯಲ್ಲಿ ಕೂಡ ಸೈ ಎನಿಸಿಕೊಂಡಿದೆ.ಯಾವುದೇ ನಿಸ್ವಾರ್ಥವಿಲ್ಲದ ಯುವ ಮನಸುಗಳ ನಿಷ್ಠಾವಂತ ಸೇವೆಯನ್ನು ನೋಡುವಾಗ ಬಹಳ ಸಂತೋಷವಾಗುತ್ತದೆ ಎಂದು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಹೇಳಿದರು.
ಅವರು ಬೆಳಾಲು ಚಿತ್ತಾರ ಯುವಶಕ್ತಿ ಗೆಳೆಯರ ಬಳಗ ಇವರ ನೇತೃತ್ವದಲ್ಲಿ ಪೆರಿಯಡ್ಕ ಸ.ಕಿ.ಪ್ರಾ.ಶಾಲೆಯಲ್ಲಿ ಅ.24 ರಂದು ನಡೆದ 7ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವದ ಕ್ರೀಡಾಕೂಟದ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸನ್ಮಾನ: ಊರಿನ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಧಾರ್ಮಿಕ ವಲಯದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ದೈವ ಸೇವಕರುಗಳಾದ ನಾರಾಯಣ ಮಡಿವಾಳ ಪರರ್ತ್ಯಡ್ಡ, ನಾರಾಯಣ ಮಡಿವಾಳ ಮಂಜುಶ್ರೀ ನಿಲಯ ಮಾಯ ಹಾಗೂ ವಿದ್ಯುತ್ ಘಟಕದಲ್ಲಿ ಎಂಟು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ಆನಂದ ಹಾಗೂ ಸಹಕಾರ ಸಂಘದ ನಿವೃತ್ತರಾದ ದೇಜಪ್ಪ ಗೌಡ ಅರಣೆಮಾರು ಇವರನ್ನು ಗೌರವಿಸಲಾಯಿತು.ಜೊತೆಗೆ ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಾದ ಹೇಮಂತ್, ಆದ್ಯಾ, ಆರ್ವಿ.ಜಿ.ಗೌಡ ರನ್ನು ಗುರುತಿಸಲಾಯಿತು.ನಮ್ಮ ಕುಡ್ಲ ಚಾನೆಲ್ ಆಯೋಜಿಸಿದ್ದ ಡಾನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಫಿನಾಲೆಗೆ ಆಯ್ಕೆಯಿಗಿರುವ ಚಾರ್ಲಿ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಬಳಿಕ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉದ್ಯಮಿ ಜಯಣ್ಣ ಮಿನಂದೇಲು, ಪೆರಿಯಡ್ಕ ಸ.ಕಿ.ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯ, ಉಜಿರೆ ಶ್ರೀ ಧ.ಮಂ.ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಶಾರೀರಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದ್ರೆಯ ಶಾರೀರಿಕ ನಿರ್ದೇಶಕ ದಿನೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸಂತೋಷ್ ಮಡಿವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಸುರೇಶ್ ಇಂರ್ಬಿತ್ತಿಲು ಸ್ವಾಗತಿಸಿ, ಚಿತ್ತಾರ ಯುವಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ಬೆಳಿಯಪ್ಪ.ಕೆ.ಕೆರೆಕೋಡಿ ಅಧ್ಯಕ್ಷೀಯ ನೆಲೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ವಂದಿಸಿದರು.ಗಿರೀಶ್ ಮಂಜೊತ್ತು ಕಾರ್ಯಕ್ರಮ ನಿರೂಪಿಸಿದರು.