ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ವಿಶ್ವ ಸಂಖ್ಯಾಶಾಸ್ತ್ರೀಯ ದಿನದ ಉಪನ್ಯಾಸ ಕಾರ್ಯಕ್ರಮ

0

ಉಜಿರೆ: ಯೋಚನೆ ಮತ್ತು ಯೋಜನೆಗಳನ್ನು ಅನ್ವಯಿಸಿ ಅನುಷ್ಠಾನಗೊಳಿಸುವಲ್ಲಿ ದತ್ತಾಂಶ ಸಂಗ್ರಹ ಮತ್ತು ವಿಶ್ಲೇಷಣೆಯ ಮಾದರಿಗಳ ಕೊಡುಗೆ ಗಣನೀಯವಾದುದು ಎಂದು ಸೇಂಟ್ ಆಗ್ನೆಸ್ ಕಾಲೇಜಿನ ಆಡಳಿತ ವಿಭಾಗದ ಡೀನ್ ಶುಭರೇಖಾ ಶೆಟ್ಟಿ ನುಡಿದರು.

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಖ್ಯಾಶಾಸ್ತ್ರ ವಿಭಾಗವು ವಿಶ್ವ ಸಂಖ್ಯಾಶಾಸ್ತ್ರೀಯ ದಿನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಮಾಹಿತಿಯೂ ಅದರದ್ದೇ ಆದ ಮೌಲ್ಯವನ್ನು ಹೊಂದಿರುತ್ತದೆ. ಅದನ್ನು ಸರಳವಾಗಿ ಅರ್ಥೈಸಲು ಅಂಕಿ ಅಂಶಗಳು ಅಗತ್ಯ. ಜಗತ್ತಿನ ಎಲ್ಲಾ ಕ್ಷೇತ್ರಗಳನ್ನು ದತ್ತಾಂಶವೆಂಬುದು ಆವರಿಸಿಕೊಂಡಿದೆ. ಸರಕಾರ ಅಥವಾ ಸಮಾಜದ ಯಾವುದೇ ಯೋಚನೆ ಆಗಲಿ ಅದು ಕಾರ್ಯರೂಪಕ್ಕೆ ಬರಬೇಕಾದರೆ ಅಂಕಿ ಅಂಶಗಳ ಮೂಲವನ್ನು ಒಳಗೊಂಡಿರಲೇಬೇಕು ಎಂದರು.

ಜಗತ್ತಿನ ಎಲ್ಲಾ ಕ್ಷೇತ್ರಗಳನ್ನು, ಜನರನ್ನು ಒಗ್ಗೂಡಿಸುವ ಕೆಲಸವನ್ನು ದತ್ತಾಂಶಗಳು ಮಾತ್ರ ಮಾಡಲು ಸಾಧ್ಯ. ಸಂಖ್ಯಾಶಾಸ್ತ್ರದಲ್ಲಿ ಅಂಕಿ ಅಂಶಗಳ ಮಾಹಿತಿ ಕಲೆ ಹಾಕಿ ಅವುಗಳನ್ನು ವಿಮರ್ಶಿಸಿ ನಂತರ ಪ್ರಕಟಿಸುವುದರಿಂದ ಸಂಖ್ಯೆಗಳು ದತ್ತಾಂಶವಾಗಿ ಮಾರ್ಪಾಡುತ್ತವೆ. ಮಾನವ ಪ್ರತಿ ಹೊಸ ಮಾಹಿತಿ ಪಡೆಯಲು ಕೇವಲ 8.25 ಸೆಕೆಂಡ್ ಗ್ರಹಿಕಾ ಶಕ್ತಿಯನ್ನು ಹೊಂದಿರುತ್ತಾನೆ. ಆಧುನಿಕ ಕಾಲದಲ್ಲಿ ಮಾನವನ ಗ್ರಹಿಕೆ ಸಾಮರ್ಥ್ಯ ಕಡಿಮೆಯಾಗಲು ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳು ಕಾರಣವಾಗಿವೆ ಎಂದು ಮಾಹಿತಿ ನೀಡಿದರು.

ಸಮಾಜದ ಸುಸ್ಥಿರ ಅಭಿವೃದ್ದಿಯಲ್ಲಿ ದತ್ತಾಂಶಗಳ ಪಾತ್ರ ಮಹತ್ವದ್ದಾಗಿದೆ. ಸಂಖ್ಯಾಶಾಸ್ತ್ರದ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸರಿಯಾದ ಸೂತ್ರ ಅಳವಡಿಕೆ ಮಾಡುವುದು ಅಗತ್ಯ. ಅದರಿಂದ ಮಾತ್ರ ನಿಖರ ಅಂಕಿ ಅಂಶಗಳ ಉತ್ತರ ದೊರೆಯುತ್ತದೆ ಎಂದು ತಿಳಿಸಿದರು. ಸಂಖ್ಯಾಶಾಸ್ತ್ರದ ಐತಿಹಾಸಿಕ ಮಹತ್ವವನ್ನು ಬಿಂಬಿಸಿ ಸಂವಾದ ನಡೆಸಿದರು.

ನಂತರ ವಿಶ್ವ ಸಂಖ್ಯಾಶಾಸ್ತ್ರ ದಿನದ ಪ್ರಯುಕ್ತವಾಗಿ ಎಸ್.ಡಿ.ಎಂ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಕ್ವಿಝ್, ಪೋಸ್ಟರ್ ಮೇಕಿಂಗ್, ಮಲ್ಟಿ ಟಾಸ್ಕಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಶುಭರೇಖಾ ಹಾಗೂ ಸವಿತಾ ಕುಮಾರಿ ಪ್ರಶಸ್ತಿಗಳನ್ನು ವಿತರಿಸಿದರು.ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಸವಿತಾ ಕುಮಾರಿ ಪ್ರಾಸ್ತಾವಿಕ ನುಡಿಗಳಾಡಿದರು. ಅಶ್ವಿತಿ ಸ್ವಾಗತಿಸಿದರು, ಪ್ರಚಿತಾ ನಿರೂಪಿಸಿದರು, ಧೀಮಹಿ ವಂದಿಸಿದರು.

LEAVE A REPLY

Please enter your comment!
Please enter your name here