ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ರೊಬೊಟಿಕ್ಸ್ ಮತ್ತು ಹೋಮ್ ಆಟೊಮೇಷನ್ ಕುರಿತು ಎರಡು ದಿನಗಳ ಕಾರ್ಯಾಗಾರ ಉದ್ಘಾಟನೆ

0

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ (ಐಕ್ಯುಎಸಿ) ಸಹಯೋಗದಲ್ಲಿ ರೊಬೊಟಿಕ್ಸ್ ಮತ್ತು ಹೋಮ್ ಆಟೊಮೇಷನ್ ಕುರಿತು ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಆಯೋಜಿಸಲಾದ ಎರಡು ದಿನಗಳ ಕಾರ್ಯಾಗಾರವನ್ನು ಕಾಲೇಜಿನ ಪರೀಕ್ಷಾಂಗ ಕುಲಸಚಿವೆ ಪ್ರೊ.ನಂದಾಕುಮಾರಿ ಕೆ.ಪಿ. ಅ.20ರಂದು ಉದ್ಘಾಟಿಸಿ ಮಾತನಾಡಿ, ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಅದ್ಭುತ ಅನುಭವ ನೀಡಲಿದ್ದು, ಸ್ಮರಣೀಯವಾಗಿರಲಿದೆ. ದೈನಂದಿನ ಜೀವನದಲ್ಲಿ ನಾವು ರೋಬೋಟ್ ಗಳ ಕುರಿತು ಕೇಳುತ್ತೇವೆ. ರೆಸ್ಟೋರೆಂಟ್ಸ್ ಹಾಗೂ ಆಸ್ಪತ್ರೆಗಳಲ್ಲಿ ರೋಬೋಟ್ ಗಳನ್ನು ಕಾಣಬಹುದು.ಉಜಿರೆಯಂತಹ ಗ್ರಾಮೀಣ ಪ್ರದೇಶಗಳನ್ನೂ ರೋಬೋಟ್ ಗಳು ತಲುಪಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಪ್ರತಿ ವರ್ಷ ಭೌತಶಾಸ್ತ್ರ ವಿಭಾಗವು ಆಸಕ್ತಿದಾಯಕ ಕಾರ್ಯಾಗಾರಗಳನ್ನು ನಡೆಸುತ್ತಲೇ ಬಂದಿದೆ. ಪ್ರಸ್ತುತ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಸಾಕಷ್ಟು ಚಟುವಟಿಕೆಗಳೊಂದಿಗೆ ಸುಂದರ ಅನುಭವ ನೀಡುತ್ತದೆ ಎಂದು ಹೇಳಿದರು.

ಕಾಲೇಜಿನ ಭೌತಶಾಸ್ತ್ರ ವಿಭಾಗವನ್ನು 1966ರಲ್ಲಿ ಪ್ರಾರಂಭಿಸಲಾಗಿದ್ದು, ಅನೇಕರು ಈ ವಿಭಾಗಕ್ಕೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ವಿಭಾಗದ ಕೆಲವು ಹಿರಿಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ಪ್ರಾಂಶುಪಾಲ ಮತ್ತು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಸ್. ಎನ್. ಕಾಕತ್ಕರ್, ?ಎರಡು ವರ್ಷಗಳ ಹಿಂದೆ ನಾವು ಆಯೋಜಿಸಿದ್ದ ಇದೇ ರೀತಿಯ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಆರ್ಡಿನೋ ಐಸಿ ಬಳಸಿ ರಿಮೋಟ್ ಕಾರ್, ಟ್ರಾಫಿಕ್ ಸಿಗ್ನಲ್‌ಗಳು, ಸ್ವಯಂಚಾಲಿತ ಅಲಾರಾಂ ಇತ್ಯಾದಿ ಅನೇಕ ಯೋಜನೆಗಳನ್ನು ವಿನ್ಯಾಸಗೊಳಿಸಿದ್ದಾರೆ? ಎಂದು ಸ್ಮರಿಸಿಕೊಂಡರು.

ಸಂಪನ್ಮೂಲ ವ್ಯಕ್ತಿಗಳಾದ ಉಜಿರೆ ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದ (ಎಸ್.ಡಿ.ಎಂ.ಐಟಿ) ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅವಿನಾಶ್ ಎಸ್., ಬೆಂಗಳೂರಿನ ಬಾಷ್ ಗ್ಲೋಬಲ್ ಸಾಫ್ಟ್ವೇರ್ ಟೆಕ್ನಾಲಜೀಸ್ ನ ಸೀನಿಯರ್ ಇಂಜಿನಿಯರ್ ಪ್ರಶಾಂತ್ ಕುಮಾರ್ ಜಿ. ಎನ್., ಬಿಟಿಎಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಎಂಬೆಡೆಡ್ ಸಾಫ್ಟ್‌ವೇರ್ ಡಿಸೈನ್ ಇಂಜಿನಿಯರ್ ಹಾಲಸ್ವಾಮಿ ಎಚ್. ಪಿ., ಹಾಗೂ ಕಾಂಟಿನೆಂಟಲ್ ನ ಟೆಸ್ಟ್ ಡಿಸೈನ್ ಇಂಜಿನಿಯರ್ ಮಿಥುನ್ ನಾಗಪ್ಪ ನಾಯ್ಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಹೋಂ ಆಟೋಮೇಶನ್ ನಲ್ಲಿ ಸ್ವಯಂಚಾಲಿತ ಬಲ್ಬ್, ಬಾಗಿಲು ಹಾಗೂ ಫ್ಯಾನುಗಳ ನಿರ್ವಹಣೆ ಬಗ್ಗೆ ತಿಳಿಸಿ ಕೊಡುವುದರ ಜತೆಗೆ ಟ್ರಾಫಿಕ್ ಸಿಗ್ನಲ್, ರಿಮೋಟ್ ಕಂಟ್ರೋಲ್ ಸ್ವಿಚ್, ಚಾಲಕ ರಹಿತ ವಾಹನದ ಮಾದರಿ ತಯಾರಿ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು ಹಾಗೂ ಪ್ರಯೋಗಗಳನ್ನು ಮಾಡಿ ತೋರಿಸಿದರು.

ಕಾರ್ಯಕ್ರಮ ಸಂಯೋಜಕಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ನಮ್ರತಾ ಜೈನ್ ಸ್ವಾಗತಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಲಿಖಿತ ವಂದಿಸಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ರುಚಿತಾ ನಿರೂಪಿಸಿದರು.

LEAVE A REPLY

Please enter your comment!
Please enter your name here