

ಬೆಳ್ತಂಗಡಿ: ಮಡಂತ್ಯಾರು ಪಾರೆಂಕಿಯಲ್ಲಿ ಖಾಸಗಿ ವ್ಯಕ್ತಿಯೋರ್ವರು ಬಂದ್ ಮಾಡಿರುವ ಸಾರ್ವಜನಿಕ ಕಾಲುಸಂಕವನ್ನು ತೆರವುಗೊಳಿಸಬೇಕು, ಕೃಷಿಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಚಿನ್ನದ ಸಾಲದ ಬಡ್ಡಿ ದರವನ್ನು ಶೇ.3ಕ್ಕೆ ಇಳಿಸಬೇಕು, ಸರಕಾರದ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಿಸಬೇಕು, ಪಡಿತರ ಚೀಟಿ ತಿದ್ದುಪಡಿ ಮಾಡಲು ಉಂಟಾಗಿರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕನ್ನಡ ಸೇನೆ ಕರ್ನಾಟಕ ಇದರ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮತ್ತು ಬೆಳ್ತಂಗಡಿ ತಾಲೂಕು ಅಧ್ಯಕ್ಷ ಗುರುಪ್ರಸಾದ್ ಮಾಲಾಡಿ ಹೇಳಿದರು.
ಅವರು ಅ.13ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯ ಪಾರೆಂಕಿ ಎಂಬಲ್ಲಿ ಸರ್ವೆ ನಂಬ್ರ 141ರ ಪಹಣಿ ಕಲಂ 11ರಲ್ಲಿ 10 ಲಿಂಕ್ಸ್ 2 ಕಾಲು ದಾರಿ ಊರ್ಜಿತದಲ್ಲಿದೆ.ಸಾರ್ವಜನಿಕ ಕಾಲುಸಂಕ ಬಂದ್ ಮಾಡಿದರ ಬಗ್ಗೆ ಎಲ್ಲರ ಗಮನಕ್ಕೆ ತಂದು ನಂತರ ಸಾರ್ವಜನಿಕರು ಮಾಜಿ ಸಚಿವರಾದ ಕೆ.ಗಂಗಾಧರ ಗೌಡರಿಗೆ ಮನವಿ ನೀಡಿದ್ದಾರೆ. ಅವರು ಕಂದಾಯ ಸಚಿವರಿಗೆ ಮನವಿ ಮಾಡಿದ್ದಾರೆ. ಸಚಿವರು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಹಶೀಲ್ದಾರರು ಸ್ಥಳ ತನಿಖೆ ಕೈಗೊಂಡು ಅಧಿಕಾರಿ ವರ್ಗದ ಜತೆ ಭೇಟಿ ಕೊಟ್ಟು ನ್ಯಾಯದ ಭರವಸೆ ನೀಡಿದ್ದಾರೆ. ನಕಾಶೆ ತಯಾರಾಗಿದ್ದು, ಜಿಲ್ಲಾಧಿಕಾರಿಯವರು ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವ ಆದೇಶ ನೀಡಿದ್ದಾರೆ. ಅದರೂ ರಸ್ತೆ ತೆರವು ಕಾರ್ಯ ವಿಳಂಬ ರೀತಿಯಲ್ಲಿ ಸಾಗುತ್ತಿದೆ. ಸದ್ರಿ ಆದೇಶ ಪಾಲನೆ ಆಗದಿದ್ದಾಗ ಮಂಗಳೂರಿನಲ್ಲಿ ಉಸ್ತುವಾರಿ ಸಚಿವರ ನೇತೃತ್ವದ ಜನತಾ ದರ್ಶನದಲ್ಲಿ ಇದರ ಬಗ್ಗೆ ಮನವಿ ಸಲ್ಲಿಸಿದಾಗ ಯಾವುದೇ ಸ್ಪಂದನೆ ದೊರಕಿಲ್ಲ. ಜಿಲ್ಲಾಧಿಕಾರಿಯವರ ಆದೇಶ ಇನ್ನೂ ಪಾಲನೆ ಆಗಿಲ್ಲ. ರಸ್ತೆ ತಡೆಯಾಗಿದ್ದರಿಂದ ಆದಂ ಎಂಬವರ ಅಡಿಕೆ ತೋಟಕ್ಕೆ ಹೋಗಲು ಆಗದೆ 40 ಅಡಿಕೆ ಸಸಿಗಳು ನಾಶಗೊಂಡಿದೆ. ಅನೇಕ ಮಂದಿ ಹೈನುಗಾರಿಕೆ ನಡೆಸುವ ರೈತರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಈ ಕಾಲು ದಾರಿಯನ್ನು ಅವಲಂಬಿಸಿದ್ದಾರೆ. ದಾರಿ ತಡೆಯಾದ ಪರಿಣಾಮ ರೈತರಿಗೆ ಅನ್ಯಾಯವಾಗಿದೆ. ತಕ್ಷಣ ಸಾರ್ವಜನಿಕ ಕಾಲುಸಂಕ ಬಂದ್ ತೆರವಿಗೆ ಸೂಕ್ತ ಕ್ರಮ ಕೈಗೊಂಡಲ್ಲಿ ಹೋರಾಟ ಕೈ ಬಿಡಲಾಗುವುದು. ಇಲ್ಲದಿದ್ದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಚಂದ್ರಶೇಖರ್ ಮತ್ತು ಗುರುಪ್ರಸಾದ್ ಮಾಲಾಡಿ ಹೇಳಿದರು.
ಪುತ್ತೂರು ಗ್ರಾಮಾಂತರ ಜಿಲ್ಲೆಯಾಗಬೇಕು: ಜಿಲ್ಲಾಧ್ಯಕ್ಷ ಚಂದ್ರಶೇಖರವರು ಮಾತನಾಡಿ ಕನ್ನಡ ಸೇನೆ-ಕರ್ನಾಟಕ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿದ ಸಂಘಟನೆಯಾಗಿದೆ. ಜನಸಂಖ್ಯೆ ಆಧಾರಿತ ದೃಷ್ಟಿಯಿಂದ ಪುತ್ತೂರು ಗ್ರಾಮಾಂತರ ಜಿಲ್ಲೆಯಾಬೇಕು ಮತ್ತು ಪುತ್ತೂರಿನಲ್ಲಿ ಎಸ್.ಪಿ. ಕಛೇರಿ ಆರಂಭಕ್ಕೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಆದಂ, ಕಾರ್ಯದರ್ಶಿ ಕೃಷ್ಣ, ಸಂಚಾಲಕ ಯು.ಅಬ್ಬಾಸ್ ಮತ್ತು ಮುಖಂಡ ಜೋಸೆಫ್ ಮೊರಾಸ್ ಉಪಸ್ಥಿತರಿದ್ದರು.