ಉಜಿರೆ: ‘ತೆಲಿಕೆ ನಲಿಕೆ ಟ್ರೋಲ್ಸ್’ ನೂರನೇ ಸಂಚಿಕೆ ಬಿಡುಗಡೆ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಬೋಧಕೇತರ ಸಿಬ್ಬಂದಿ ಸುರೇಂದ್ರ ಜೈನ್ ನಾರಾವಿ ನಿರ್ದೇಶನದ ‘ತೆಲಿಕೆ ನಲಿಕೆ ಟ್ರೋಲ್ಸ್’ ಕಿರು ಹಾಸ್ಯ ವಿಡಿಯೋ ಸರಣಿಯ ನೂರನೆಯ ಸಂಚಿಕೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಬಿಡುಗಡೆಗೊಳಿಸಿದರು. ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಅ.12ರಂದು ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು, “ನವರಸದಲ್ಲಿ ಅತ್ಯಂತ ಮುಖ್ಯವಾದದ್ದು ಹಾಸ್ಯ ರಸ.ಇದು ಎಲ್ಲರ ಮನಸ್ಸಿಗೂ ಮುದ ನೀಡುವಂತಹದ್ದು. ಹಾಸ್ಯವೆಂಬುದು ಮನುಷ್ಯನ ಎಲ್ಲಾ ಕಷ್ಟಗಳಿಗೂ ಔಷಧವಿದ್ದಂತೆ.ಹಾಗೆಯೇ ಯಾವುದೇ ವಿಡಿಯೋ ಮಾಡಬೇಕಾದರೂ ಮುಂಚಿತ ತಯಾರಿ ಬಹು ಮುಖ್ಯವಾಗುತ್ತದೆ.ಜೀವನದಲ್ಲಿ ಸಾಕಷ್ಟು ಒತ್ತಡಗಳಿದ್ದರೂ ಸಹ ಧೃತಿಗೆಡದೆ ಇತರರಿಗೆ ಮಾದರಿಯಾಗುವಂತೆ ಜೀವಿಸಬೇಕು ಎಂಬುದಕ್ಕೆ ಸುರೇಂದ್ರ ಜೈನ್‌ ಮಾದರಿ” ಎಂದು ಶ್ಲಾಘಿಸಿದರು.

ತೆಲಿಕೆ ನಲಿಕೆ ತಂಡದ ಕಲಾವಿದರಾದ ಶೀನ ಪೂಜಾರಿ ನಾರಾವಿ, ಆನಂದ ಕುಲಾಲ್, ಸೂರಜ್ ಜೈನ್ ಸಹಿತ ಎಲ್ಲ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾಲೇಜಿನ ಲೆಕ್ಕಪತ್ರ ನಿರ್ವಹಣಾ ವಿಭಾಗದ ಮುಖ್ಯಸ್ಥ ದಿವಾಕರ್ ಪಟವರ್ಧನ್‌, ಆಡಳಿತ ವಿಭಾಗದ ಮುಖ್ಯಸ್ಥ ರಾಜಪ್ಪ ಕೆ.ಎಸ್., ಸುರೇಂದ್ರ ಜೈನ್ ನಾರಾವಿ,  ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಸ್ವಾಗತಿಸಿ, ಪ್ರಸ್ತಾವಿಸಿದರು. ಸಹಾಯಕ ಪ್ರಾಧ್ಯಾಪಕ ಸುನಿಲ್ ಹೆಗ್ಡೆ ವಂದಿಸಿದರು.ಪ್ರಥಮ ಎಂ.ಸಿ.ಜೆ. ವಿದ್ಯಾರ್ಥಿನಿ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.

‘ತೆಲಿಕೆ ನಲಿಕೆ ಟ್ರೋಲ್ಸ್ ಕಿರು ಹಾಸ್ಯ ಸರಣಿಯ ಎಲ್ಲ ವಿಡಿಯೋಗಳು ‘ತೆಲಿಕೆ ನಲಿಕೆ ಪ್ರೊಡಕ್ಷನ್ಸ್’ ಯೂಟ್ಯೂಬ್‌ ಚಾನಲ್ ನಲ್ಲಿ ಲಭ್ಯವಿವೆ. https://youtu.be/M1Luy6ayE5A?si=LpD97GyBFtNZHV8N

LEAVE A REPLY

Please enter your comment!
Please enter your name here