ಮನಸೂರೆಗೊಂಡ ಸರ್ವಧರ್ಮಗಳಲ್ಲಿ ಹಾಗೂ ಸಂವಿಧಾನದಲ್ಲಿ ಕ್ಷಮಾಧರ್ಮ ಆನ್ಲೈನ್ ಕಾರ್ಯಕ್ರಮ

0

ಬೆಳ್ತಂಗಡಿ: ನಿರಂಜನ ಲಹರಿ ಮಾಧ್ಯಮದ ಮೂಲಕ ಅ.7ರಂದು ಆನ್ಲೈನ್ ಮಾಧ್ಯಮದಲ್ಲಿ ಸರ್ವಧರ್ಮಗಳಲ್ಲಿ ಹಾಗೂ ಸಂವಿಧಾನದಲ್ಲಿ ಕ್ಷಮಾಧರ್ಮ ಎಂಬ ವಿಚಾರದ ಬಗ್ಗೆ ಸೊಗಸಾದ ಧರ್ಮಸಭೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಬೇಕಿದ್ದ ಕರ್ನಾಟಕ ವಿಧಾನಸಭೆಯ ಸಭಾಪತಿ ಯು ಟಿ ಖಾದರ್ ವಿದೇಶ ಪ್ರವಾಸದಲ್ಲಿ ಇದ್ದ ಕಾರಣ ಶುಭ ಸಂದೇಶವನ್ನು ಕಳುಹಿಸಿದರು.ಕ್ಷಮೆಯ ಗುಣವು ಪ್ರಪಂಚದ ಎಲ್ಲಾ ಜೀವಿಗಳಲ್ಲಿ ಮೂಡಿ ಬಂದು ಸರ್ವಧರ್ಮಗಳ ಬಂಧುಗಳು ಅನ್ಯೋನ್ಯವಾಗಿ ಬಾಳಿ ಬದುಕಲಿ ಎಂದು ಶುಭ ಸಂದೇಶ ಕಳುಹಿಸಿದರು.

ಧರ್ಮಸ್ಥಳದ ಡಿ ಸುರೇಂದ್ರ ಕುಮಾರ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕ್ಷಮೆ ಕೋರುವವನಿಗಿಂತಲೂ ಕ್ಷಮೆ ನೀಡುವವನು ಶ್ರೇಷ್ಠನಾಗಿದ್ದಾನೆ ಎಂದು ನುಡಿದರು. ಕ್ಷಮಾ ಧರ್ಮವನ್ನು ಎಲ್ಲರೂ ಅಳವಡಿಸಿಕೊಂಡಲ್ಲಿ ನಾಗರಿಕ ನಾಡಿನ ಶಾಂತಿಯ ತೋಟದಲ್ಲಿ ಸುಭಿಕ್ಷೆ ಉಂಟಾಗುತ್ತದೆ ಎಂದು ನುಡಿದರು.

ಇಸ್ಲಾಂ ಧರ್ಮದಲ್ಲಿ ಕ್ಷಮಾಧರ್ಮ ಎಂಬ ವಿಚಾರದ ಮೇಲೆ ಮಾತನಾಡಿದ ಕೆ.ಎಂ.ಹನೀಫ್ ಸಖಾಫಿ ಬಂಗೇರಕಟ್ಟೆ, ಧರ್ಮ ಗುರುಗಳು ಎಂಜೆಎಮ್ ಕುಂಡದಬೆಟ್ಟು ಇವರು ಪ್ರತೀಕಾರದ ಸಾಮಾರ್ಥ್ಯ ಇದ್ದರೂ ಸಬಲನು ನಿರ್ಬಲನನ್ನು ಕ್ಷಮಿಸಿ ಬಿಡುವುದೇ ಶ್ರೇಷ್ಟ ಧರ್ಮವಾಗಿದೆ ಎಂದರು. ತಪ್ಪು ಮಾಡಿದವನನ್ನು ಕ್ಷಮಿಸುವ ಭಾವನೆ ನಮ್ಮದಾಗಬೇಕು ಎಂದರು.ಕ್ರೈಸ್ತ ಧರ್ಮದಲ್ಲಿ ಕ್ಷಮಾಧರ್ಮ ಎಂಬ ವಿಚಾರದ ಮೇಲೆ ಫಾ | ಜೋಸ್ವಿನ್ ಪ್ರವೀಣ್ ಡಿಸೋಜ ಸೈಂಟ್ ಜೋಸೆಫ್ ಸೆಮಿನರಿ ಪ್ರಾಧ್ಯಾಪಕರು ಮಾತನಾಡುತ್ತಾ ನಾವುಗಳು ಕ್ಷಮೆಯನ್ನು ಹೊಂದಿಲ್ಲವಾದರೆ ನಮ್ಮನ್ನು ಪರಲೋಕದಲ್ಲಿರುವ ದೇವರೂ ಕೂಡ ಕ್ಷಮಿಸಲಾರರು ಎಂದರು. ದೇವರಿಗೆ ಕ್ಷಮಿಸುವವನು ಮಾತ್ರ ಆಪ್ತನಾಗುತ್ತಾನೆ ಹೊರತು ಕ್ಷಮೆಯನ್ನು ಧರಿಸದವನು ಲೋಕಕ್ಕೆ ಪ್ರಿಯನಾಗಲಾರನು ಎಂದರು.

ಹಿಂದೂ ಧರ್ಮದಲ್ಲಿ ಕ್ಷಮಾಧರ್ಮ ಎಂಬ ವಿಚಾರದ ಮೇಲೆ ಮಾತನಾಡಿ ಖ್ಯಾತ ಉಪನ್ಯಾಸಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಕ್ಷಮೆಯು ಶಕ್ತಿಯ ಪ್ರತಿರೂಪವಾಗಿದೆ ಎಂದರು. ಪಾಪ ಕರ್ಮ ಮಾಡುತ್ತಿರುವ ಜೀವಿಯನ್ನು ಪುಣ್ಯ ಸಂಚಯ ಮಾಡುತ್ತಿರುವ ಜೀವಿಯು ಕ್ಷಮಿಸುತ್ತದೆ.ಹಾಗೆಯೇ ಕ್ಷಮೆಗೂ ಒಂದು ಮಿತಿ ಇದ್ದಾಗ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ ಎಂದರು.

ಸಂವಿಧಾನದಲ್ಲಿ ಕ್ಷಮಾಧರ್ಮ ಎಂಬ ವಿಚಾರದ ಮೇಲೆ ಮಾತನಾಡಿದ ಬೆಂಗಳೂರಿನ ಪಬ್ಲಿಕ್ ಪ್ರಾಸಿಕ್ಯೂಟರ್ ಗಣಪತಿ ಪ್ರಸನ್ನ ಅವರು ಮಾತನಾಡುತ್ತಾ ರಾಷ್ಟ್ರಪತಿಗಳಿಗೆ ಕೆಲವು ಸಂದರ್ಭಗಳಲ್ಲಿ , ಸೂಕ್ತವಾದ ಕಾರಣಕ್ಕಾಗಿ ಜೀವವಾಧಿ ಶಿಕ್ಷೆಗೂ ಗುರಿಯಾಗಿರುವ ಅಪರಾಧಿಯನ್ನು ಅಪರಾಧಿಯ ಮನವಿಯ ಮೇರೆಗೆ ಕ್ಷಮಾದಾನ ನೀಡುವ ನಿಯಮ ಇದೆ ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ಮೂಡುಬಿದಿರೆ ಜೈನ್ ಹೈಸ್ಕೂಲ್ ಪ್ರಾದ್ಯಾಪಕ ನಿತೇಶ್ ಬಲ್ಲಾಳ್ ಉಳಿಯಬೀಡು ಇವರು ಮಾತನಾಡುತ್ತಾ ಜೈನ ಧರ್ಮದಲ್ಲಿ ಕ್ಷಮೆಯೇ ಪರಮೋಚ್ಛ ಧರ್ಮವಾಗಿದೆ ಎಂದರು. ನಾವು ಮಾಡುವ ಕೆಲಸಗಳೇ ನಮಗೆ ಹಿತ ಅಹಿತವನ್ನು ಉಂಟುಮಾಡುತ್ತದೆ. ಹಾಗಾಗಿ ಕ್ಷಮಿಸುವುದು ಜೈನ ಧರ್ಮದಲ್ಲಿ ಪರಮ ಉದಾತ್ತ ಭಾವನೆಯಾಗಿದೆ ಎಂದರು.

ಕಾರ್ಯಕ್ರಮವನ್ನು ಆಯೋಜಿಸಿದ್ದ ನಿರಂಜನ್ ಜೈನ್ ಕುದ್ಯಾಡಿ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕ ಬೆಂಗಳೂರಿನ ಮಾಳ ಹರ್ಷೇಂದ್ರ ಜೈನ್ ಸ್ವಾಗತಿಸಿ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಖ್ಯಾತ ಗಾಯಕಿ ಜಯಶ್ರೀ ಡಿ ಜೈನ್ ಹೊರನಾಡು ಮಂಗಲಾಚರಣೆಗೈದರು. ಖ್ಯಾತ ನೃತ್ಯ ಕಲಾವಿದೆ ಬೆಳಗಾವಿಯ ಪ್ರೇಮಾ ಶಾಂತಿನಾಥ ಉಪಾಧ್ಯೆ ಇವರ ತಂಡ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಅಳದಂಗಡಿಯ ಮಿತ್ರಸೇನ್ ಜೈನ್ ಶಾಂತಿಮಂತ್ರ ಹಾಡಿದರು.

ವಜ್ರಕುಮಾರ್ ಜೈನ್ ಬೆಂಗಳೂರು, ಧೀರಜ್ ಡಿ ಜೈನ್ ಹೊರನಾಡು, ಧನುಷ್ ಡಿ ಜೈನ್ ಕಾರ್ಯಕ್ರಮಕ್ಕೆ ಸಹಕರಿಸಿದರು.ಕಾರ್ಯಕ್ರಮವು ನಿರಂಜನ ಲಹರಿ ಯೂಟ್ಯೂಬ್ ಮತ್ತು ಕರ್ನಾಟಕದಲ್ಲಿ ಜೈನ ಧರ್ಮ ಹಾಗೂ ಇನ್ನಿತರ ಫೇಸ್ಬುಕ್ ಪೇಜುಗಳಲ್ಲಿ ನೇರ ಪ್ರಸಾರಗೊಂಡಿತು.

 ಕಾರ್ಯಕ್ರಮದ ಲಿಂಕ್ : https://www.youtube.com/live/eJQptK2bSvE?si=3vHnWX5gNIEKIoW3

LEAVE A REPLY

Please enter your comment!
Please enter your name here