ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿಡ ಕುದ್ದಮನೆ ಸೇಸ ಗೌಡ ಎಂಬವರ ಕುಟುಂಬ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಫೌಂಡೇಶನ್ ಕಿತ್ತೆಸೆದಿರುವ ಘಟನೆ ಅ.06ರಂದು ನಡೆದಿತ್ತು.
ಈ ಘಟನೆಯ ಬಗ್ಗೆ ಅ.7 ರಂದು ಬೆಳ್ತಂಗಡಿ ಶಾಸಕರು ನಿಗ ವಹಿಸಿ ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆಯ ಸಚಿವರ ಜೊತೆ ಫೋನ್ ಕರೆ ಮೂಲಕ ಮಾತನಾಡಿದ್ದು ಸಚಿವರು ಅಧಿಕಾರಿಗಳಿಗೆ ಯತಾಸ್ಥಿತಿ ಕಾಪಾಡಲು ಸೂಚಿಸಿದಲ್ಲದೆ ಮೇಲಾಧಿಕಾರಿಗಳಿಂದ ವರದಿ ಪಡೆದು ಬಳಿಕ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದರು.
ಆದರೆ ಅ.09ರಂದು ಬೆಳಗ್ಗೆ ಮತ್ತೆ ಅಧಿಕಾರಿಗಳು ಮನೆ ತೆರವುಗೊಳಿಸಲು ಮುಂದಾದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು ಉತ್ತರ ಕ್ಷೇತ್ರ ಶಾಸಕ ಭರತ್ ಶೆಟ್ಟಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸೇರಿದಂತೆ ಇತರರು ತೆರವುಗೊಳಿಸದಂತೆ ತಡೆದರು.
ಈ ವೇಳೆ ಸ್ಥಳದಲ್ಲಿ ಮಾತಿನ ಚಕಮಕಿ ನಡೆಯಿತ್ತಲ್ಲದೇ ಯಾವುದೇ ಕಾರಣಕ್ಕೂ ಮನೆ ಕೆಡವಲು ಬಿಡುವುದಿಲ್ಲ, ಜಾಗದ ಅಳತೆ ಮಾಡಿ ಅಧಿಕೃತ ದಾಖಲೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಶಾಸಕರುಗಳ ಮತ್ತು ಅಧಿಕಾರಿಗಳ ನಡುವೆ ಮತ್ತಷ್ಟು ಮಾತಿನ ಚಕಮಖಿ ನಡೆಯಿತಲ್ಲದೇ ನೂಕಾಟವೂ ನಡೆಯಿತು.ಸದ್ಯ ಗಂಭೀರ ಮಾತುಕತೆ ಮುಂದುವರಿದಿದೆ.