



ಬೆಳ್ತಂಗಡಿ: ಕ್ರೀಡೆ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯ ವರ್ಧನೆಯ ಜೊತೆಗೆ ಶ್ರೇಷ್ಠ ಕ್ರೀಡಾಪಟುಗಳಾಗಲು ಸತತ ಅಭ್ಯಾಸ ಅಗತ್ಯ. ಹಾಗಾಗಿ ಬದ್ಧತೆಯಿಂದ ತರಬೇತಿ ಮಾಡಿ ಸಾಧಕರಾಗಿ ಮೂಡಿ ಬರುವಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಪ್ರಯತ್ನಶೀಲರಾಗಬೇಕು ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜೋಸೆಫ್ ಪಿ.ಎನ್.ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿಭಾಗದ ತಾಲ್ಲೂಕು ಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುದೇವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ವಸಂತ ಬಂಗೇರ ಮಾತನಾಡಿ, ಕಬಡ್ಡಿ ರೈತರ ಮಕ್ಕಳು ಆಡುವ ಗ್ರಾಮೀಣ ಪ್ರದೇಶದ ಆಟವಾಗಿದ್ದು, ಇಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿ ಬೆಳೆದಿದೆ. ಕ್ರೀಡೆಯಲ್ಲಿ ಭಾಗವಹಿಸುವವರು ಅದರಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಕ್ರೀಡಾಪಟುವಾಗಿ ಮೂಡಿ ಬರಬೇಕು ಎಂದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಯರಾಜ್ ಜೈನ್, ತಾಲ್ಲೂಕು ಮಟ್ಟದ ಕ್ರೀಡಾ ಸಮಿತಿ ಸಂಯೋಜಕ ಸಂದೀಪ್ ಮುಂಡಾಜೆ, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಇದ್ದರು.ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ .ಶಮೀವುಲ್ಲ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮನುಜ ಕಾರ್ಯಕ್ರಮ ನಿರೂಪಿಸಿದರು.ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ವಂದಿಸಿದರು.
ಕ್ರೀಡಾ ತರಬೇತುದಾರರಿಗೆ ಸನ್ಮಾನ: ಸಮಾರಂಭದಲ್ಲಿ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ವಿಭಾಗದಲ್ಲಿ ತರಬೇತಿ ನೀಡಿದ ನವೀನ್ ಇಂದಬೆಟ್ಟು, ಹರೀಶ್ ಪೂಜಾರಿ, ಸುಹಾಸ್ ವಾಮದಪದವು, ಮನೀತ್ ಹಾಗೂ ಪ್ರಸಾದ್ ಇವರನ್ನು ಗೌರವಿಸಲಾಯಿತು.









