ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಎನ್.ಎಸ್.ಎಸ್ ದಿನಾಚರಣೆ- ನಿಮ್ಮನ್ನು ನೀವು ಅಡಗಿಸಿಕೊಳ್ಳಬೇಡಿ ತೊಡಗಿಸಿಕೊಳ್ಳಿ: ಡಾ.ಟಿ.ಕೃಷ್ಣಮೂರ್ತಿ

0

ಉಜಿರೆ: “ನಾನು ಇಂದು ವಿವಿಧ ಕಾರ್ಯಕ್ಷೇತ್ರಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಮುಖ್ಯ ಕಾರಣ ಎನ್.ಎಸ್.ಎಸ್ ಹಾಕಿಕೊಟ್ಟ ಭದ್ರ ಬುನಾದಿ.ಎನ್.ಎಸ್.ಎಸ್ ಬಹಳಷ್ಟು ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ. ಸ್ವಯಂಸೇವಕರು ನಿಷ್ಠೆಯಿಂದ ನಿಮ್ಮನ್ನು ನೀವು ಸೇವೆಯಲ್ಲಿ ತೊಡಗಿಸಿಕೊಳ್ಳಿ, ಆಗ ಮಾತ್ರ ನಿಮ್ಮಲ್ಲಿ ಧೈರ್ಯ, ಛಲ, ನಾಯಕತ್ವದ ಗುಣ ಬೆಳೆಯಲು ಸಾಧ್ಯ”ಎಂದು ಎಸ್.ಡಿ.ಎಂ ವಸತಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಹಾಗೂ ಎಸ್.ಡಿ.ಎಂ ಕಾಲೇಜು(ಸ್ವಾಯತ್ತ) ಉಜಿರೆಯ ಹಿರಿಯ ಎನ್.ಎಸ್.ಎಸ್ ಯೋಚನಾಧಿಕಾರಿಗಳಾಗಿದ್ದ ಡಾ.ಟಿ.ಕೃಷ್ಣಮೂರ್ತಿ ಹೇಳಿದರು.

1973 ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು [ಸ್ವಾಯತ್ತ] ಉಜಿರೆಯಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಸೇವಾ ಯೋಜನಾ ಘಟಕಕ್ಕೆ 50 ವರ್ಷಗಳು ಪೂರೈಸಿದ್ದು, ತನ್ನ ಸುವರ್ಣೋತ್ಸವದ ಸಂಭ್ರಮಾಚರಣೆಯಲ್ಲಿದೆ.ಸೆ.24ರಂದು ದೇಶಾದ್ಯಂತ ಸ್ಥಾಪಿತವಾದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಅಂಗವಾಗಿ ಎಸ್.ಡಿ.ಎಂ ಕಾಲೇಜು, ಉಜಿರೆಯ ಸಮ್ಯಗ್ದರ್ಶನ ಸಭಾಂಗಣದಲ್ಲಿ ಸೆ.25 ಸೋಮವಾರದಂದು “ಎನ್.ಎಸ್.ಎಸ್ ದಿನಾಚರಣೆ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಕೃಷ್ಣಮೂರ್ತಿ ಮಾತನಾಡಿ, “ವಿದ್ಯಾರ್ಥಿಗಳು ನಿಮ್ಮನ್ನು ನೀವು ಅಡಗಿಸಿಕೊಳ್ಳಬೇಡಿ, ತೊಡಗಿಸಿಕೊಳ್ಳಿ. ಬರಿಯ ಕಾಲಿ ಓದು ಬೇಡ, ಪ್ರಪಂಚದ ಜ್ಞಾನವು ಮುಖ್ಯ. ನೀವೆಲ್ಲಾ ಸತ್ಪಾತ್ರರಾಗಿ ಸೇವೆಸಲ್ಲಿಸಬೇಕು, ದೇಶದಲ್ಲಿ ಇರುವ ದುಶ್ಚಟಗಳನ್ನು ಹೋಗಲಾಡಿಸಬೇಕು. ನೀವು ಬೆಳೆಯಿರಿ,ಎನ್.ಎಸ್.ಎಸ್ ಅನ್ನು ಬೆಳೆಸಿರಿ”ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಉಜಿರೆ ಗ್ರಾಮ ಪಂಚಾಯತ್ ನ ಸ್ವಚ್ಛತಾ ಕಾರ್ಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ರಾಜು ಎಚ್.ಕೆ ರವರಿಗೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಬಿ.ಎ ಕುಮಾರ್ ಹೆಗ್ಡೆ ಸನ್ಮಾನಿಸಿ ಗೌರವಿಸಿದರು.

ಕ್ರೀಡಾ ದಿನದ ಹಾಗೂ ಎನ್.ಎಸ್.ಎಸ್ ದಿನಾಚರಣೆಯ ಅಂಗವಾಗಿ ಘಟಕದ ವತಿಯಿಂದ ಸ್ವಯಂಸೇವಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಗಣ್ಯರಿಂದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಬಿ.ಎ ಕುಮಾರ್ ಹೆಗ್ಡೆ ಮಾತನಾಡಿ,”ಎನ್.ಎಸ್.ಎಸ್ ನಮ್ಮಲ್ಲಿರುವ ದೌರ್ಬಲ್ಯಗಳನ್ನು ಕೆತ್ತುತ್ತ ಹೋಗುತ್ತದೆ ಹಾಗೂ ನಮ್ಮಲ್ಲಿರುವ ಸಾಮರ್ಥ್ಯಗಳನ್ನು, ಧನಾತ್ಮಕ ಅಂಶಗಳನ್ನು ನಮ್ಮ ವ್ಯಕ್ತಿತ್ವಕ್ಕೆ ಮೆತ್ತುತ್ತಾ ಹೋಗುತ್ತದೆ. ಎನ್.ಎಸ್.ಎಸ್ ಮುಖ್ಯವಾಗಿ ವ್ಯಕ್ತಿತ್ವ ವಿಕಸನ, ಸಂವಹನ ಕಲೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸ್ವಯಂಸೇವಕರು ಶ್ರದ್ದೆಯಿಂದ ದುಡಿಯಬೇಕು.ನಿಸ್ವಾರ್ಥ ಸೇವೆ ಸದಾ ನೆಮ್ಮದಿ ನೀಡುತ್ತದೆ”ಎಂದರು.

ಸ್ವಯಂಸೇವಕ ವರುಣ್ ಡಾ. ಕೃಷ್ಣಮೂರ್ತಿ ರವರ ಹಾಗೂ ಸ್ವಯಂಸೇವಕ ವಾಣಿ ರಾಜು ಹೆಚ್.ಕೆ ರವರ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು.

ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್, ಮತ್ತು ಪ್ರೊ ದೀಪಾ ಆರ್.ಪಿ ಮಾರ್ಗದರ್ಶನ ಮಾಡಿದರು.ಹಿರಿಯ ಹಾಗೂ ಕಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು.ಸ್ವಯಂಸೇವಕಿ ಚಿಂತನ ಸ್ವಾಗತಿಸಿ, ಸ್ವಯಂಸೇವಕಿ ವಿನುತಾ ವಂದಿಸಿ, ಉಪಕಾರ್ಯದರ್ಶಿ ಸುದೇಶ್ ಮತ್ತು ಸ್ವಯಂಸೇವಕ ಶ್ರೇಯಾ ನಿರೂಪಿಸಿದರು.

LEAVE A REPLY

Please enter your comment!
Please enter your name here