ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮದ್ಯ ಮಾರಾಟದ ಹಾದಿ ಹಿಡಿದ ರಾಜ್ಯ ಸರಕಾರ-ಪ್ರತಾಪ್‌ಸಿಂಹ ನಾಯಕ್- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲ ಎಂದು ಹೇಳುವ ಸರ್ಕಾರ ಇವತ್ತು ತನ್ನ ರಾಜಕೀಯ ಲಾಭದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮದ್ಯ ಮಾರಾಟದ ಹಾದಿ ಹಿಡಿದಿರುವುದು ವಿಷಾದನೀಯ.1000 ಮದ್ಯದಂಗಡಿಯನ್ನು ಕರ್ನಾಟಕದ ಉದ್ದಗಲಕ್ಕೆ, ಗ್ರಾಮಾಂತರ ಪ್ರದೇಶಕ್ಕೆ ಪಂಚಾಯತ್ ಮಟ್ಟದಲ್ಲೂ ತೆರೆಯುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ.5 ಗ್ಯಾರಂಟಿಗಳನ್ನು ಹೇಳಿ ಜನರನ್ನು ತಪ್ಪುದಾರಿಗೆ ಕೊಂಡುಹೋಗಿ, ಆರ್ಥಿಕವಾಗಿ ಈ ಹೊರೆಯನ್ನು ಭರಿಸಲಾಗದೆ ಮದ್ಯದ ವ್ಯವಹಾರವನ್ನು ಪ್ರಾರಂಭ ಮಾಡಿರುವುದು ಕಾಂಗ್ರೆಸ್‌ನ ನೈತಿಕ ದಿವಾಳಿತನಕ್ಕೆ ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು.

ಅವರು ಶಾಸಕರ ಕಛೇರಿ ಶ್ರಮಿಕದಲ್ಲಿ ಸೆ.26 ರಂದು ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜನತೆ ಉತ್ತಮ ನಿರೀಕ್ಷೆಯಿಂದ ಕಾಂಗ್ರೆಸ್‌ಗೆ ಮತ ನೀಡಿ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತಂದಿದ್ದರು.ಅಲ್ಪ ಅವಧಿಯಲ್ಲಿ ಜನತೆ ಈ ಸರ್ಕಾರದ ಮೇಲಿಟ್ಟಿದ್ದ ಭರವಸೆಗಳನ್ನು ಕಳೆದುಕೊಂಡಿದ್ದಾರೆ.ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕಾಂಗ್ರೆಸ್ ಪಂಚಾಯತ್ ಮಟ್ಟದಲ್ಲಿ ಮದ್ಯದ ಅಂಗಡಿ ತೆರೆಯಲು ಹೆಜ್ಜೆ ಇಟ್ಟಿದೆ.ಸಂಪೂರ್ಣವಾಗಿ ಈ ಗ್ಯಾರಂಟಿಯ ಹೊರೆಯ ಭಾರವನ್ನು ಹೊರುವುದರಲ್ಲೇ ಮುಳುಗಿರುವ ಈ ಸರಕಾರವು ರಾಜ್ಯದಲ್ಲಿ ಮಳೆ ಕಡಿಮೆಯಾಗಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ.ವಿದ್ಯುತ್ ಉತ್ಪಾದನೆಯ ಕೊರತೆಯಿದ್ದು ಈ ಯಾವುದೇ ಸಮಸ್ಯೆಗಳಿಗೆ ಸ್ಪಂದನೆ ಕೊಡಲು ಸರಕಾರ ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ ಎಂದು ಹೇಳಿದರು.

ಕಾವೇರಿ ಯೋಜನೆಯ ನಿರ್ವಹಣೆಯಲ್ಲಿ ಈ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯದ ಜನರಿಗೆ ಕುಡಿಯುವ ನೀರು, ರೈತರಿಗೆ ಕೃಷಿ ಚಟುವಟಿಕೆಗೆ ನೀರು ನೀಡಲಾಗದ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಸರ್ಕಾರವು ನೀರಿನ ಬದಲಿಗೆ ಮದ್ಯವನ್ನು ಮನೆ ಮನೆಗೆ ಹಂಚಲು ಯೋಚಿಸಿದೆ.ಮಹಾತ್ಮ ಗಾಂಧೀಜಿಯ ಹೆಸರನ್ನು ಹೇಳಿ ದಿನ ಕಳೆಯುವ ಕಾಂಗ್ರೆಸ್‌ಗೆ ಗಾಂಧೀಜಿ ಹೆಸರು ಮಾತ್ರ ಬೇಕು.ಅವರ ವಿಚಾರ, ಆಶಯ ಹಾಗೂ ತತ್ವಗಳು ಬೇಡ, ಜನ ಸಾಮಾನ್ಯರ ಕಾಳಜಿ ಇಲ್ಲವೆಂಬುದನ್ನು ಈ ಸರಕಾರ ಮದ್ಯದಂಗಡಿ ಮೂಲಕ ತೋರಿಸುತ್ತಿರುವುದು ವಿಷಾದನೀಯ ಎಂದು ಹೇಳಿದ ಅವರು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ವಿಶ್ವವೇ ಮೆಚ್ಚುವಂತಹ ಸಾಧನೆ ಮಾಡಿದೆ.ಚಂದ್ರಯಾನ, ಜಿ೨೦ ಸಫಲತೆ ಮೂಲಕ ಇಡೀ ಪ್ರಪಂಚಕ್ಕೆ ನೇತೃತ್ವ ಕೊಡುವ ಸಾಮರ್ಥ್ಯ, ಭಾರತದ ಅಭಿವೃದ್ಧಿ, ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸುತ್ತಾ ಇದೆ.ಆದರೆ ಕರ್ನಾಟಕ ರಾಜ್ಯದ ಸರ್ಕಾರ ಸಂಪೂರ್ಣ ವಿಫಲವಾಗಿ ಮದ್ಯ ಮಾರಾಟ ಮಾಡುವ ದಯನೀಯ ಸ್ಥಿತಿಗೆ ತಲುಪಿರುವುದು ಕಾಣುತ್ತಿದೆ.ಇದಕ್ಕೆಲ್ಲ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ ಅವರು ಲೋಕಸಭಾ ಚುನಾವಣೆಗಾಗಿ ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸದಾನಂದ ಉಂಗಿಲಬೈಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here