ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಸುವರ್ಣ ಮಹೋತ್ಸವ ಸಮಿತಿ ವತಿಯಿಂದ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಪ್ರಾಂಶುಪಾಲ ಸುಕುಮಾರ್ ಜೈನ್ ಅವರಿಗೆ ಅಭಿನಂದನೆ ಹಾಗೂ ಬೆಳ್ತಂಗಡಿ ಸ.ಪ.ಪೂ.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬೈಂದೂರಿನ ಉಪ್ಪುಂದಕ್ಕೆ ವರ್ಗಾವಣೆಗೊಂಡ ಗಣಪತಿ ಭಟ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಸೆ.9ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಧನಂಜಯ ರಾವ್ ಬಿ.ಕೆ ಅವರು ವಹಿಸಿ ಬೆಳ್ತಂಗಡಿ ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾಗಿ ಉತ್ತಮ ಸಾಧನೆಗಳ ಮೂಲಕ ಸುಕುಮಾರ್ ಅವರು ಸಂಸ್ಥೆಯನ್ನು ರಾಜ್ಯಮಟ್ಟಕ್ಕೆ ಒಯ್ದ ಕೀರ್ತಿಗೆ ಪಾತ್ರರಾಗಿದ್ದಾರೆ.ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇದೆ.ಬೆಳ್ತಂಗಡಿ ಸರಕಾರಿ ಕಾಲೇಜು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಉತ್ತಮ ಫಲಿತಾಂಶ, ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕ ವೃಂದ ಹಾಗೂ ಶಿಸ್ತಿನ ವಿದ್ಯಾರ್ಥಿಗಳಿರುವುದು ಸಂಸ್ಥೆಯು ರಾಜ್ಯ ಮಟ್ಟದ ಕೀರ್ತಿ ಪಡೆಯಲು ಕಾರಣವಾಗಿದೆ ಎಂದು ಹೇಳಿ ವರ್ಗಾಣೆಗೊಂಡ ಉಪನ್ಯಾಸಕ ಗಣಪತಿ ಭಟ್ ಅವರಿಗೆ ಈ ಸಂದರ್ಭದಲ್ಲಿ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಹಳೆ ವಿದ್ಯಾರ್ಥಿ ಪ್ರಮೋದ್ ಆರ್.ನಾಯಕ್ ಅಭಿನಂದಿಸಿದರು.ಸಮಾರಂಭದಲ್ಲಿ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಸುಕುಮಾರ್ ಜೈನ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.ಬೆಳ್ತಂಗಡಿ ಕಾಲೇಜಿನಿಂದ ಉಪ್ಪುಂದಕ್ಕೆ ವರ್ಗಾವಣೆಗೊಂಡ ಉಪನ್ಯಾಸ ಗಣಪತಿ ಭಟ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಬೀಳ್ಕೋಡಲಾಯಿತು.
ಸನ್ಮಾನಕ್ಕೆ ಸುಕುಮಾರ್ ಜೈನ್ ಕೃತಜ್ಞತೆ ಸಲ್ಲಿಸಿದರು.ವರ್ಗಾವಣೆಗೊಂಡ ಉಪನ್ಯಾಸಕ ಗಣಪತಿ ಭಟ್ ಅವರು ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ನ.ಪಂ ಮಾಜಿ ಸದಸ್ಯ ಸಂತೋಷ್ ಕುಮಾರ್ ಜೈನ್, ಗಣಪತಿ ಭಟ್ ರವರ ಪತ್ನಿ ನಾಗರತ್ನ ಉಪಸ್ಥಿತರಿದ್ದರು.ಉಪನ್ಯಾಸಕ ಶೀನಾ ನಾಡೋಳಿ ಸ್ವಾಗತಿಸಿ, ಉಪನ್ಯಾಸಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ಉಪನ್ಯಾಸಕ ಆನಂದ ಡಿ.ಅಭಿನಂದನಾ ಭಾಷಣ ಮಾಡಿದರು.ಸುವರ್ಣ ಕುಮಾರಿ, ಮಂಗಳ ಗೌರಿ ಸನ್ಮಾನ ಪತ್ರ ವಾಚಿಸಿದರು.ಉಪನ್ಯಾಸಕ ತಾರಾನಾಥ್ ವಂದಿಸಿದರು.ಸುವರ್ಣ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವೃಂದದವರು ಭಾಗವಹಿಸಿದ್ದರು.