ಬೆಳ್ತಂಗಡಿ: ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ಈಗಲಾದರೂ ನ್ಯಾಯ ಸಿಗುವಂತಾಗಲು ಮತ್ತು ಅಪರಾಧ ಕೃತ್ಯ ಎಸಗಿದವರು ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ನಿರುತ್ತೇಜಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಈ ವಿಚಾರವಾಗಿ ಸಮಾಜದಲ್ಲಿ ಜನಾಭಿಪ್ರಾಯ ರೂಪಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರ ನೇತೃತ್ವದಲ್ಲ ಆಗಸ್ಟ್ 26ರಂದು ಬೆಳ್ತಂಗಡಿಯಿಂದ ಧರ್ಮಸ್ಥಳದ ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸೆ.07ರಂದು ಬೆಂಗಳೂರು ತಲುಪಲಿದ್ದು ಸೆ.08ರಂದು ವಿಧಾನಸೌಧ ಮುಟ್ಟಲಿದೆ ಎಂದು ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಪ್ರವೀಣ್ ಪಿರೇರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 14 ದಿನಗಳ ಕಾಲ ನಡೆಯಲಿರುವ 330 ಕಿ.ಮೀ.ಗಳ ಈ ಪಾದಯಾತ್ರೆಯು ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ ಚಾರ್ಮಾಡಿ ಮೂಡಿಗೆರೆ ಬೇಲೂರು ಹಾಸನ ಮಾರ್ಗವಾಗಿ ಬೆಂಗಳೂರಿಗೆ ತಲುಪುವುದು.ಸುಮಾರು 200 ಜನ ಭಾಗವಹಿಸಿ, ಕೆಆರ್‌ಎಸ್ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಈ ಹಕ್ಕೋತ್ತಾಯಗಳನ್ನು ಮಂಡಿಸಲಾಗುವುದು ಎಂದರು.ವಿಪಕ್ಷವಾಗಿ ನಾವು ಹೋರಾಟ ಮಾಡುತ್ತೇವೆ ಇದು ನಮ್ಮ ಮುಖ್ಯ ಉದ್ದೇಶವಾಗಿದೆ.ಸೆ.8ಕ್ಕೆ ಪಾದಯಾತ್ರೆ ಬೆಂಗಳೂರು ತಲುಪುತ್ತದೆ.ಆ ದಿನ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಪ್ರಕರಣ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮರು ತನಿಖೆ ಮಾಡಬೇಕು ಒತ್ತಾಯಿಸುತ್ತೇವೆ.ಈ ಪಾದಯಾತ್ರೆ ಕೇವಲ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ರಾಜ್ಯದ ಎಲ್ಲಾ ಪ್ರಜ್ಞಾವಂತ ಸಾರ್ವಜನಿಕರು ಭಾಗವಹಿಸಬೇಕೆಂದು ಕೆಆರ್‌ಎಸ್ ಪಕ್ಷದ ವತಿಯಿಂದ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯದರ್ಶಿಗಳಾದ ಯಶೋದಾ, ಪ್ರಕಾಶ್ ಮತ್ತು ಸುನೀತಾ ಉಪಸ್ಥಿತರಿದ್ದರು.