ಕುತ್ಲೂರು ಸ.ಉ.ಪ್ರಾ. ಶಾಲೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕಿಗೆ ಗೌರವ- ಸಹಕಾರ ಮನೋಭಾವನೆಯಿಂದ ಸರಕಾರಿ ಶಾಲೆ ವೃದ್ಧಿ

0

ಬೆಳ್ತಂಗಡಿ: ಸೂಕ್ತ ಸವಲತ್ತುಗಳ ಕೊರತೆಯಿಂದಾಗಿ ಇಂದು ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿದೆ ಎಂದು ಅಂದುಕೊಂಡಿದ್ದೇವೆ. ಆದರೆ ಕುತ್ಲೂರು ಶಾಲೆ ಇದಕ್ಕೊಂದು ಅಪವಾದ. ಕಳೆದ ಕೆಲವು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಇನ್ನೇನು ಉಳಿದ ಶಾಲೆಗಳ ಸ್ಥಿತಿಗೆ ತಲುಪುತ್ತದೆ ಎಂದಾಗ, ಪ್ರತಿಯೊಬ್ಬರ ಸಹಕಾರ ಮನೋಭಾವನೆಯಿಂದ ಇಂದು ಈ ಶಾಲೆ ಶತಕದತ್ತ ಹೆಜ್ಜೆ ಇಟ್ಟಿರುವುದು ಅಭಿನಂದನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಇಂದಾಜೆ ಹರ್ಷ ವ್ಯಕ್ತಪಡಿಸಿದರು.

ಕುತ್ಲೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಮನಾ ಜಿ. ಅವರನ್ನು ಶಾಲಾ ವಠಾರದಲ್ಲಿ ಆ.15 ರಂದು ಊರವರು, ಶಾಲೆ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಹಮ್ಮಿಕೊಂಡ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮುಂದುವರಿದು ಮಾತನಾಡಿದ ಶ್ರೀನಿವಾಸ್ ಇಂದಾಜೆ ಅವರು, ಸರಕಾರ, ಜನಪ್ರತಿನಿಧಿಗಳು, ಊರ ಜನರು, ಪೋಷಕರೊಂದಿಗೆ ಪತ್ರಕರ್ತರು ಜತೆಗೂಡಿ ಕುತ್ಲೂರು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಇಲ್ಲಿನ ಶಿಕ್ಷಕರು ಅದನ್ನು ಪರಿಪೂರ್ಣವಾಗಿ ಬಳಸಿಕೊಂಡಿದ್ದಾರೆ. ಪರಿಣಾಮ ಇಂದು ಶಾಲೆ ಪ್ರಗತಿಹೊಂದಿದೆ. ಈ ಎಲ್ಲ ಬೆಳವಣಿಗೆಯ ಹಿಂದೆ ಶಾಲಾ ನಿವೃತ್ತ ಶ್ರೇಷ್ಠ ಮುಖ್ಯೋಪಾಧ್ಯಾಯನಿ ಸುಮನಾ ಅವರ ಕೊಡುಗೆ ಅನನ್ಯವಾಗಿದ್ದು ಅವರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಭಟ್ ಮಾತನಾಡಿ, ಗ್ರಾಮ ವಾಸ್ತವ್ಯದ ಪರಿಣಾಮದಿಂದ ಶಾಲೆ ಮತ್ತು ಊರಿನಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಈ ಅಭಿವೃದ್ಧಿಗೆ ಕಾರಣೀಕರ್ತರಾದ ಜಿಲ್ಲಾ ಕಾರ್ಯನಿರತ ಪತ್ರಕರ್ತರು ಅಭಿನಂದನಾರ್ಹರು. ಸಹಕಾರ ನೀಡಿದ ನಾರಾವಿ ಗ್ರಾಮ ಪಂಚಾಯತ್ ಆಡಳಿತ ವರ್ಗ, ವಿದ್ಯಾಭಿಮಾನಿಗಳು, ಹಳೇ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು. ಗೌರವ ಸ್ವೀಕರಿಸಿದ ಸುಮನಾ ಜಿ.ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜವರ್ಮ ಜೈನ್, ನಾರಾವಿ ಮತ್ತು ಕುತ್ಲೂರು ಗ್ರಾಮ ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಊರಿನ ಪ್ರಮುಖರಾದ ಶಶಿಕಾಂತ್ ಆರಿಗ, ನೇಮಿರಾಜ್ ಜೈನ್, ನಿವೃತ್ತ ಮುಖ್ಯೋಪಾಧ್ಯಾಯರಾದ ಜೈ ರಾಜ್ ಕಾಡ, ಮರ್ಸಲಿನ್ ಮಸ್ಕರೇನಸ್, ಯೋಧ ವಿಜೇತ್ ಮಡಿವಾಳ್ ಉಪಸ್ಥಿತರಿದ್ದರು.

ಕುತ್ಲೂರು ಸರಕಾರಿ ಉ.ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಮನಾ ಜಿ. ಮತ್ತು ಪ್ರಭಾಕರ ಬುಣ್ಣಾಲ್ ದಂಪತಿಯವರನ್ನು ಎಲ್ಲರ ಸಮ್ಮುಖದಲ್ಲಿ ಗಣ್ಯರು ಬಂಗಾರದ ಉಂಗುರ ನೀಡಿ ಸಮ್ಮಾನಿಸಿ ಗೌರವಿಸಿದರು.

ಶಾಲೆಯ ಮುಖ್ಯೋಪಾಧ್ಯಾಯನಿ ರೂಪ ಕುಮಾರಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಸಹ ಶಿಕ್ಷಕಿ ಆಶಾ ವಂದಿಸಿದರು. ಶಿಕ್ಷಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here