‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮ

0

ಉಜಿರೆ: ಕನ್ನಡ ಓದು ಕುರಿತಂತೆ ಸಂಕುಚಿತ ಮನೋಭಾವ ಹಾಗೂ ಕನ್ನಡ ಕಲಿಕೆ ಕಷ್ಟ ಎನ್ನುವ ಅಪಪ್ರಚಾರ ಸಲ್ಲದು ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇದರ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಹೇಳಿದರು.

ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದಲ್ಲಿ ಇಂದು ನಡೆದ ‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

“ಕವಿವಾಣಿಯಂತೆ ಸುಲಿದ ಬಾಳೆಹಣ್ಣಿನಂತೆ, ಸಿಪ್ಪೆ ಸುಲಿದ ಕಬ್ಬಿನಂತೆ, ಬಿಸಿ ಆರಿದ ಹಾಲಿನಂತೆ ಕನ್ನಡ ಭಾಷೆ ಸುಲಭ-ಸರಳವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ, ಸಂಸ್ಕೃತಿ ದೊಡ್ಡದು. ಆದರೆ, ಪ್ರಸ್ತುತ ಕನ್ನಡ ಓದಿನ ಬಗ್ಗೆ ಸಂಕೋಚ ಪಡುವ ಸ್ಥಿತಿ ನಿರ್ಮಾಣವಾಗಿದೆ. ಸಂಕುಚಿತ ಮನೋಭಾವ ವ್ಯಾಪಕವಾಗುವುದರ ಜತೆಗೆ, ‘ಕನ್ನಡ ಕಷ್ಟ’ ಎನ್ನುವ ಅಪಪ್ರಚಾರವೂ ನಡೆಯುತ್ತಿದೆ” ಎಂದು ಅವರು ಹೇಳಿದರು.ಪ್ರಾಚೀನ ಸಾಹಿತ್ಯವಾಗಲಿ, ಅರ್ವಾಚೀನ ಸಾಹಿತ್ಯವಾಗಲಿ, ಆ ಸಾಹಿತ್ಯದಲ್ಲಿ ನಮ್ಮ ಹಿರಿಯರು ದಾರಿ ಮಾಡಿಕೊಂಡು ಸಂತಸಪಟ್ಟರು. ಆ ದಾರಿಯಲ್ಲಿ ನಡೆದು ಸಂತಸಪಡುವ ಅವಕಾಶವನ್ನು ನಾವೇ ದೂರ ಮಾಡಿಕೊಳ್ಳುತ್ತಿದ್ದೇವೆ. ಅವರು ತೋರಿದ ದಾರಿಯಲ್ಲಿ ನಡೆದರೆ ಬದುಕು ಹಸಿರಿನ ಬಯಲಾಗುತ್ತದೆ” ಎಂದ ಅವರು, “ಕುವೆಂಪು ಅವರ ಮಾತಿನಂತೆ ಪ್ರತಿ ವಿದ್ಯಾರ್ಥಿಯೂ ಓರ್ವ ಗೌರವ ತಪಸ್ವಿ. ವಿದ್ಯಾರ್ಥಿ ಜೀವನವು ಚಿಂತನ, ಮನನ, ಧ್ಯಾನದೊಂದಿಗೆ ಸಾಗಬೇಕು. ವಿದ್ಯಾರ್ಥಿಜೀವನವು ತಪಸ್ಸಿನಂತಿದ್ದಾಗ ಬದುಕು ಬಂಗಾರವಾಗುತ್ತದೆ” ಎಂದು ಕಿವಿಮಾತು ಹೇಳಿದರು.
“2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದ್ದು, ಕನ್ನಡದ ಪ್ರಾಚೀನ ಆಕರ ಗ್ರಂಥಗಳು, ಕಾವ್ಯ, ಹಸ್ತಪ್ರತಿ, ಶಾಸನ, ವಾಸ್ತುಶಿಲ್ಪ ಇತ್ಯಾದಿ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಪ್ರಚಾರೋಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹತ್ತು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಚಾರೋಪನ್ಯಾಸವನ್ನು ಪುಸ್ತಕ ರೂಪದಲ್ಲಿ ಹೊರತರುವ ಇರಾದೆ ಇದೆ. ಅದರಂತೆ ನಾಲ್ಕನೇ ಸರಣಿಯ ಕಾರ್ಯಕ್ರಮವನ್ನು ಶಿಸ್ತು,ಬೋಧನೆ ದೃಷ್ಟಿಯಲ್ಲಿ ಶಿಕ್ಷಣ ಪ್ರಿಯರಿಗೆ ಪ್ರಿಯವಾಗಿರುವ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ, ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತ ಕುಮಾರ ಅವರು ವಿಚಾರ ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅವರು “ಕನ್ನಡ ನಾಡು, ನುಡಿ, ಭಾಷೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸ ತಂದಿದೆ” ಎಂದರು.

ಕಾಲೇಜಿನ ಕನ್ನಡ ವಿಭಾಗವು ವಿವಿಧ ಉಪನ್ಯಾಸ, ಕ್ಷೇತ್ರಾಧ್ಯಯನ ಇತ್ಯಾದಿ ಮೌಲಿಕ ಚಟುವಟಿಕೆಗಳನ್ನು ನಡೆಸುತ್ತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.ಅತಿಥಿಗಳನ್ನು ಗೌರವಿಸಲಾಯಿತು.

ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್ ಸ್ವಾಗತಿಸಿದರು.

ಕಾರ್ಯಕ್ರಮ ಸಂಯೋಜಕ ಡಾ.ನಾಗಣ್ಣ ಡಿ.ಎ. ವಂದಿಸಿದರು.ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ., ಕಲಾ ನಿಕಾಯದ ಡೀನ್ ಡಾ.ಶ್ರೀಧರ ಭಟ್, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here