ಉಜಿರೆ: ಶ್ರೀ ಧ. ಮಂ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ಆ.15ರಂದು ಭಾರತ ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ವಿಜೃಂಭಣೆಯಿಂದ ಆಚರಿಸಲಾಯಿತು.ಬೆಳಿಗ್ಗೆ 8.30 ಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಮೆಡಲ್ ಹಾಗೂ ಪ್ರಶಸ್ತಿಯನ್ನು ಪಡೆದ ಡಾ| ಪ್ರವೀಣ್ ಶೆಟ್ಟಿ ಇವರು ಧ್ವಜಾರೋಹಣವನ್ನು ಮಾಡಿದರು.ನಂತರ ಘಂಟೆ 9 ಕ್ಕೆ ಸರಿಯಾಗಿ ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿವನ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀ ಬಿ ಸೀತಾರಾಮ ತೋಳ್ಪಾಡಿತ್ತಾಯ ಇವರು ವಹಿಸಿದ್ದರು.

ಧ್ವಜವಂದನೆಗೈದ ಡಾ| ಪ್ರವೀಣ್ ಶೆಟ್ಟಿ ಇವರು ಮಾತನಾಡಿ ತನ್ನ 16 ವರ್ಷಗಳ ಸೈನಿಕ ವೃತ್ತಿಯಲ್ಲಿ ನಡೆದ ಅನೇಕ ಘಟಾನಾವಳಿಗಳನ್ನು ನೆರೆದಿದ್ದ ಸಭಾಸದರು ಹಾಗೂ ಸಾಧಕರಿಗೆ ಮನಮುಟ್ಟುವಂತೆ ತಿಳಿಸಿ ಎಲ್ಲರನ್ನು ರೋಮಾಂಚನಗೊಳಿಸುವಂತೆ ಮಾಡಿದರು. ಭಾರತ ಮಾತೆಯ ಸೇವೆಗಾಗಿ ನಮ್ಮೆಲ್ಲರ ಮನೆಯಿಂದ ಒಬ್ಬರನ್ನಾದರೂ ಸೈನಿಕ ವೃತ್ತಿಯನ್ನು ಮಾಡಲು ಕಳುಹಿಸಿದಲ್ಲಿ ಭಾರತ ದೇಶವು ಪ್ರಪಂಚದಲ್ಲಿಯೇ ಹೆಚ್ಚು ಬಲಶಾಲಿಯಾದ ದೇಶ ವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ತಮ್ಮ ಭಾಷಣದುದ್ದಕ್ಕೂ ಮೈ ನವಿರೇಳುವಂತೆ ಕಾರ್ಗಿಲ್ ಕದನದ ಬಗ್ಗೆ ಕಣ್ಣಿಗೆ ಕಟ್ಟುವಂತೆ ಇವರು ಕೆಲವೊಂದು ಘಟನೆಗಳನ್ನು ಭಾವುಕರಾಗಿಯೂ ನುಡಿದರು. ಪೂಜ್ಯ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಈ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯು ಸಮಾಜಕ್ಕೆ ಉತ್ತಮ ಆರೋಗ್ಯ ಭಾಗ್ಯವನ್ನು ಕೊಡುವುದಲ್ಲದೇ ಪೂಜ್ಯರ ಜನಸೇವಾ ಕಾರ್ಯಗಳನ್ನು ಪ್ರಶಂಶಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿಗಳಾದ ಬಿ ಸೀತಾರಾಮ ತೋಳ್ಪಾಡಿತ್ತಾಯ ಇವರು ತಮ್ಮ ಶುಭ ಸಂದೇಶವನ್ನು ನೀಡುತ್ತಾ ಡಾ|ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ಕಳೆದ ೫೦ ವರ್ಷಗಳಲ್ಲಿ ಕೆಲಸವನ್ನು ಮಾಡಿ ಅತ್ಯಂತ ನೆಮ್ಮದಿಯ ಜೀವನವನ್ನು ನಡೆಸಿರುವುದರಲ್ಲದೆ ಶಾಂತಿವನ ಟ್ರಸ್ಟ್ (ರಿ) ಇದರ ಮೂಲಕ ಎರಡು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳು ಮತ್ತು ವಿವಿಧ ವಿಭಾಗಗಳ ಕಾರ್ಯ ವೈಖರಿಗಳ ಬಗ್ಗೆ ತಿಳಿಸಿದರು. ಮುಖ್ಯ ಅಭ್ಯಾಗತ ಡಾ| ಪ್ರವೀಣ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದ ಮಾನ್ಯ ಕಾರ್ಯದರ್ಶಿಯವರು ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ|| ಗೋಪಾಲ್ ಪೂಜಾರಿ, ಸ್ಥಾನಿಕ ವೈದ್ಯಾಧಿಕಾರಿಯಾದ ಡಾ|| ಶೋಭಿತ್ ಶೆಟ್ಟಿ, ಡಾ|| ಪೂಜಾ ಜಿ. ಹಾಗೂ ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್ ಇವರು ಉಪಸ್ಥಿತರಿದ್ದರು.ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಪುಷ್ಪ ನಮನವನ್ನು ಸಲ್ಲಿಸುವುದರ ಮುಖಾಂತರ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಡಾ|| ಶೋಭಿತ್ ಶೆಟ್ಟಿಯವರು ಪ್ರಸ್ತಾವಿಕ ಮಾತುಗಳನ್ನಾಡಿದರು.ಆಸ್ಪತ್ರೆಯ ಕಿರಿಯ ವೈದ್ಯರಿಂದ ಸ್ವಾಗತ ನೃತ್ಯ, ಸ್ವಾಗತ ಯೋಗ ಹಾಗೂ ಸಿಬ್ಬಂದಿಗಳಿಂದ ವಂದೇ ಮಾತರಂ, ನಾಡಗೀತೆ ಮೊಳಗಿತು.ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಇವರು ಸ್ವಾಗತದೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.ಸುಷ್ಮಾ ಧನ್ಯವಾದವನ್ನಿತ್ತರು. ಕೊನೆಗೆ ರಾಷ್ಟ್ರಗೀತೆ ಜನಗಣಮಣದೊಂದಿಗೆ ಕಾರ್ಯಕ್ರಮ ಸುಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here