


ಉಜಿರೆ: ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಪ್ರಕಟಿಸಲಾದ “ಜ್ಞಾನಶರಧಿ” ಮತ್ತು ಜ್ಞಾನವಾರಿಧಿ” ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಇದೇ 19 ರಂದು ಶನಿವಾರ ಬೆಳಿಗ್ಯೆ ಹನ್ನೊಂದು ಗಂಟೆಗೆ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಮೈಸೂರಿನ ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ ಲೋಕಾರ್ಪಣೆ ಮಾಡಲಿದ್ದಾರೆ.
ಖ್ಯಾತ ಚಲನಚಿತ್ರ ನಟ ಸಿಹಿಕಹಿ ಚಂದ್ರು ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ವಿತರಿಸಲಿದ್ದಾರೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್ ತಿಳಿಸಿದ್ದಾರೆ.


ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕಿ ಸುಮಂಗಲ ಶುಭಾಶಂಸನೆ ಮಾಡುವರು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಕುಂಚ-ಗಾನ-ನೃತ್ಯ ವೈಭವ: ಸಂಗೀತ ವಿದುಷಿ ಶ್ರೇಯ ಕೊಳತ್ತಾಯರ ಸುಶ್ರಾವ್ಯ ಗಾಯನಕ್ಕೆ ದಾವಣಗೆರೆಯ ಚಿತ್ರಕಲಾವಿದ ಬಾಬಲೇಶ್ವರ ಕುಂಚದಲ್ಲಿ ಚಿತ್ರಕಲೆ ರೂಪಿಸಿದರೆ ಮಂಗಳೂರಿನ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿಶೇಖರ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.


            





