Read more…
ಬೆಳ್ತಂಗಡಿ: ಅಧಿಕಾರ ಸ್ವೀಕರಿಸಿ ಮೂರು ತಿಂಗಳೂ ಆಗಿಲ್ಲ. ಈಗಾಗಲೇ ಸಿದ್ಧರಾಮಯ್ಯ ಸರಕಾರದ ಎಡವಟ್ಟುಗಳು ಒಂದೊಂದೆ ಹೊರಬರುತ್ತಿದ್ದು ಕಾಂಗ್ರೇಸ್ ಭ್ರಷ್ಟಾಚಾರದ ಆಡಳಿತವನ್ನೇ ನೀಡುವುದು ಎಂಬುದು ಗಟ್ಟಿಯಾಗುತ್ತಿದೆ. ಇದಕ್ಕೆ ಇತ್ತೀಚಿನ ಕೃಷಿ ಸಚಿವರ ನಡೆಯೇ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.ಅವರು ಪತ್ರಿಕಾ ಹೇಳಿಕೆ ನೀಡಿದ್ದು ಕೃಷಿ ಸಚಿವರು ರಾಜಿನಾಮೇ ನೀಡುವಂತೆ ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಆಡಳಿತ ಪಕ್ಷದ ಶಾಸಕರು ಪತ್ರಮುಖೇನ ತಮ್ಮ ಅಸಮಾಧಾನ ಹೊರಹಾಕಿದ್ದರು.ಈ ಪತ್ರ ನಕಲಿ ಎಂದು ಹೇಳಿ ತಪ್ಪನ್ನು ಮುಚ್ಚಿ ಹಾಕಿದ್ದಾರೆ.ನಕಲಿ ಎಂದಾದರೆ ಅದರ ಬಗ್ಗೆ ಸೂಕ್ತ ತನಿಖೆ ಮಾಡಿ ನಕಲಿ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬಹುದಿತ್ತು. ಹಾಗೆ ಮಾಡದೆ ಮರೆಮಾಚುವ ಕೆಲಸ ನಡೆದಿದೆ. ಅದೇ ರೀತಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವರ್ಗ ಮಾಡುವಲ್ಲಿ ಅದರಲ್ಲೂ ಪೋಲಿಸ್ ಇಲಾಖೆಯ ವರ್ಗಾವರ್ಗಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಒಂದೇ ಹುದ್ದೆಗೆ ಎರಡು ಮೂರು ಅಧಿಕಾರಿಗಳನ್ನು ನೇಮಿಸುವುದು ನಡೆದಿರುವುದು ನೋಡಿದರೆ ಇಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಮೇಲ್ನೊಟಕ್ಕೆ ಸಾಬೀತಾಗಿದೆ. ತಿಂಗಳ ಹಿಂದೆ ಕಾಂಗ್ರೇಸ್ ಪಕ್ಷದ ಸುರ್ಜೆವಾಲಾ ಅವರು ಬೆಂಗಳೂರಿನಲ್ಲಿ ಅಧಿಕಾರಿಗಳನ್ನು ಸೇರಿಸಿಕೊಂಡು ಸಭೆ ನಡೆಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಇತ್ತೀಚೆಗೆ ಕಾಂಗ್ರೇಸ್ ಹೈಕಮಾಂಡ್ ಕೂಡ ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕು ಎಂಬ ತಾಕೀತನ್ನೂ ಮಾಡಿರುವುದು ಗಮನಾರ್ಹ. ಇದೀಗ ಮತ್ತೊಂದು ಹಗರಣ ಹೊರಗೆ ಬಿದ್ದಿದೆ. ಕೃಷಿ ಇಲಾಖೆಯ ಏಳು ಮಂದಿ ಸಹಾಯಕ ಕೃಷಿ ನಿರ್ದೇಶಕರುಗಳೇ ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ರಾಜ್ಯಪಾಲರಿಗೆ ದೂರನ್ನು ಸಲ್ಲಿಸಿರುವುದು ಸರಕಾರ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ತಿಳಿಯುತ್ತದೆ.
ಕೃಷಿ ಸಚಿವರು, ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳಿಂದ ತಲಾ ಆರರಿಂದ ಎಂಟು ಲಕ್ಷ ರೂ.ಗಳ ಲಂಚದ ಬೇಡಿಕೆ ಇಟ್ಟು ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಸಚಿವರ ವಿರುದ್ದ ಅಧಿಕಾರಿಗಳೇ ಸಿಡಿದೆದ್ದಿರುವುದು ರಾಜ್ಯವೇ ಗಮನಿಸುತ್ತಿದೆ. ಹೀಗಾಗಿ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಾಪಸಿಂಹ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರಲ್ಲದೆ ರಾಜ್ಯದ ಕಾಂಗ್ರೇಸ್ ಸರಕಾರವು ಕೇಂದ್ರದ ಕಾಂಗ್ರೇಸ್ ಹೈಕಮಾಂಡ್‌ನವರಿಗೆ ಎಟಿಎಂ ಆಗಿದೆ ಎಂದಿದ್ದಾರೆ.