



ನಮ್ಮೆಲ್ಲರ ಬದುಕು ಪಾವನವಾಗಬೇಕಾದರೆ ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಬದುಕಿನಲ್ಲಿ ಒಂದಂಶವಾದರೂ ಸೇವೆಯನ್ನು ಮಾಡಬೇಕು.ಆಗ ಮಾತ್ರ ಮನುಷ್ಯರಾಗಿ ನಾವು ಹುಟ್ಟಿರುವುದಕ್ಕೆ ಸಾರ್ಥಕವಾಗುತ್ತದೆ. ಸೇವೆ ಮಾಡಲು ನಮಗೆ ನೂರಾರು ದಾರಿಗಳಿವೆ.ಅದನ್ನು ಅರಿತು ನಡೆಯಬೇಕಾಗಿದೆ.ವಿದ್ಯಾರ್ಥಿಗಳಾದ ತಾವು ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಜೊತೆಗೆ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು.ಅಂತಹ ಕಾರ್ಯಕ್ಕೆ ತಮ್ಮ ಶಾಲೆಯು ಸದಾವಕಾಶವನ್ನು ನೀಡುತ್ತಿದೆ. ಇದರ ಜೊತೆ ಜೊತೆಗೆ ತಮ್ಮ ಹೆತ್ತವರ ಋಣವನ್ನು ತೀರಿಸುವ ಕಾರ್ಯವನ್ನು ಕೂಡ ತಾವು ಮಾಡಲೇಬೇಕು.ಇಂದು ಖಂಡಿತವಾಗಿಯೂ ತಮ್ಮನ್ನೆಲ್ಲ ಕಂಡಾಗ ನನಗೆ ಮನತುಂಬಿ ಬಂದಿದೆ. ತಮ್ಮ ವರ್ತನೆಗಳು, ಪ್ರೀತಿ ನೀತಿಗಳು, ಸರ್ವರಿಗೂ ಮಾದರಿಯಂತೆ ತಾವು ನಡೆದುಕೊಳ್ಳುವುದನ್ನು ಕಂಡಾಗ ತುಂಬಾ ಸಂತೋಷವಾಗುತ್ತಿದೆ. ಇದೇ ರೀತಿ ತಮ್ಮ ಬದುಕನ್ನು ಹಸನಾಗಿಸುವ ಕಾರ್ಯವನ್ನು ಸದಾ ಮಾಡುತ್ತಿರಿ. ತಮ್ಮಂತಹ ಸಂಸ್ಥೆಯ ಜೊತೆಗೆ ನಮ್ಮ ಬೆಳ್ತಂಗಡಿ ಲಯನ್ಸ್ ಕ್ಲಬ್ ಸದಾ ಇರುತ್ತದೆ”- ಎಂದು ಲಯನ್ ಉಮೇಶ್ ಶೆಟ್ಟಿ ಹೇಳಿದರು.



ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆಯ ಅಮೃತ ಮಹೋತ್ಸವದ ಶುಭ ಸಂದರ್ಭದ ಪೂರ್ವಭಾವಿಯಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಈ ವರ್ಷದ ಸುವರ್ಣ ಸೇವಾ ಸಂಭ್ರಮದ ನೆನಪಿಗೋಸ್ಕರ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಆಗಸ್ಟ್ 5ರಂದು ಮಾತನಾಡಿದರು.


            






