


ಉಜಿರೆ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕ ರೀತಿಯ ಸುಳ್ಳು ಆರೋಪಗಳನ್ನು ಮಾಡಿ, ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಭಕ್ತಾಭಿಮಾನಿಗಳು, ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ಎಂಬ ಸಂಘಟನೆಯನ್ನು ರಚಿಸಿಕೊಂಡಿದ್ದು, ಇದರ ವತಿಯಿಂದ ಆ.4 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಎದುರು ರಥ ಬೀದಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ, ಜಾಥಾ ಮತ್ತು ಹಕ್ಕೋತ್ತಾಯ ಮಂಡನೆ ಜರಗಿತು.

ಸುಮಾರು 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಬಾಲಕಿಯೋರ್ವಳ ಹತ್ಯೆ ಪ್ರಕರಣದ ಕುರಿತು ಸಿಬಿಐ ಕೋರ್ಟಿನಿಂದ ನೀಡಲಾದ ತೀರ್ಪಿನ ಬಗ್ಗೆ ಮತ್ತು ತದನಂತರದಲ್ಲಿ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸಮೂಹ ಮಾಧ್ಯಮಗಳಲ್ಲಿ ಮಾಡಲಾಗುತ್ತಿರುವ ಅವಹೇಳನಕಾರಿ ಅಭಿಯಾನದ ಕುರಿತು ಖಂಡಿಸಲಾಯಿತು.
ಎಲ್ಲರೂ ಒಕ್ಕೊರಲಿನಿಂದ ಹತ್ಯೆಯಾದ ಬಾಲಕಿಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂಬ ಒತ್ತಾಯವನ್ನು ಮಾಡಿದ್ದಲ್ಲದೆ, ಸರಕಾರವು ನಿಷ್ಠುರವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಈ ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲರು, ಉಜಿರೆ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಮಾಜಿ ಸಚಿವ ಅಭಯಚಂದ್ರ ಜೈನ್ ಮೂಡಬಿದ್ರೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜನಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷ ರಾಜಣ್ಣ ಕೊರವಿ, ತಾಲೂಕು ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ನಿಕಟ ಪೂರ್ವ ಅಧ್ಯಕ್ಷೆ ಶಾರದಾ ರೈ, ಇಚ್ಚಿಲ ಸುಂದರ ಗೌಡ, ಜಯರಾಜ್ ಹೊಸಕೋಟೆ, ಕೃಷ್ಣ ಕುಮಾರ್ ಪೂಂಜ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಭಜನಾ ಪರಿಷತ್ ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು, ಕ್ಷೇತ್ರದ ಸಿಬ್ಬಂದಿಗಳು, ಧರ್ಮಸ್ಥಳ ಕ್ಷೇತ್ರದ ಸಿಬ್ಬಂದಿಗಳು, ಕ್ಷೇತ್ರದ ಅಭಿಮಾನಿಗಳು ಭಾಗವಹಿಸಿದ್ದರು.

ಯೋಜನೆಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎಲ್. ಹೆಚ್. ಮಂಜುನಾಥ್ ಪ್ರಾಸ್ತವಿಕವಾಗಿ ಮಾತನಾಡಿದರು.ಬಳಿಕ ಉಜಿರೆ ರಥ ಬೀದಿಯಿಂದ ಮೆರವಣಿಗೆ, ಹಕ್ಕೋತ್ತಾಯ ಮಂಡನೆ ನಡೆಯಿತು.
