ಉಜಿರೆ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕ ರೀತಿಯ ಸುಳ್ಳು ಆರೋಪಗಳನ್ನು ಮಾಡಿ,ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಾಭಿಮಾನಿಗಳು ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ಎಂಬ ಸಂಘಟನೆಯನ್ನು ರಚಿಸಿ,31-7-2023ರಂದು ಸಮಾಲೋಚನ ಸಭೆ ನಡೆಸಿದ್ದಾರೆ. ಉಜಿರೆಯ ಕೃಷ್ಣಾನುಗ್ರಹದಲ್ಲಿ ನಡೆದ ಸಭೆಯಲ್ಲಿ ಸೌಜನ್ಯ ಕೇಸ್ ತೀರ್ಪಿನ ನಂತರ ಮತ್ತೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ವಿನಾಕಾರಣ ಮಾಡುತ್ತಿರುವ ಆರೋಪಗಳು, ಅವಹೇಳನಕಾರಿ ಅಭಿಯಾನದ ಕುರಿತಾಗಿ ದೀರ್ಘವಾಗಿ ಚರ್ಚಿಸಲಾಗಿದೆ.
4-8-2023ರಂದು ಉಜಿರೆಯಲ್ಲಿ ಬೃಹತ್ ಸಮಾವೇಶ- ಅಪಾರ ಭಕ್ತವೃಂದದಿಂದ ಹಕ್ಕೋತ್ತಾಯ ಮಂಡಿಸಲು ತೀರ್ಮಾನ
ಸೌಜನ್ಯ ಕೇಸ್ ಮುಂದಿಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೇಲೆ ಮಾಡಲಾಗುತ್ತಿರುವ ಸುಳ್ಳು ಅಪಪ್ರಚಾರಗಳನ್ನು ಖಂಡಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಂಬಂಧ 4-8-2023ನೇ ಶುಕ್ರವಾರ ಉಜಿರೆಯಲ್ಲಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದಿಂದ ಬೃಹತ್ ಸಮಾವೇಶ ಕೈಗೊಳ್ಳಲಾಗಿದೆ. ಉಜಿರೆ ಜನಾರ್ಧನ ಸ್ವಾಮಿ ದೇವಾಲಯದ ರಥಬೀದಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ನಂತರ ಸರ್ಕಾರಕ್ಕೆ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಹಕ್ಕೋತ್ತಾಯ ಮಾಡಲಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವ ಸಾಧ್ಯತೆಗಳಿವೆ. ಅಲ್ಲದೇ ಸುಳ್ಳು ಆರೋಪಗಳನ್ನು ನಿಲ್ಲಿಸುವ ಸಲುವಾಗಿ ಜನತಾ ಚಳುವಳಿಯನ್ನು ನಡೆಸಲಿದ್ದಾರೆ. ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರು, ಜನಜಾಗೃತಿ ವೇದಿಕೆ, ವಿವಿಧ ದೇವಸ್ಥಾನಗಳ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಜನಜಾಗೃತಿ ವೇದಿಕೆಯ ಉಭಯ ಜಿಲ್ಲೆಗಳ ಅಧ್ಯಕ್ಷರುಗಳು, ವಿವಿಧ ತಾಲೂಕು ಸಮಿತಿಗಳ ಅಧ್ಯಕ್ಷರುಗಳು, ಶೌರ್ಯ ತಂಡಗಳ ಮುಖ್ಯಸ್ಥರುಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಬದುಕು ಕಟ್ಟೋಣ ತಂಡದ ಸದಸ್ಯರು ,ಊರಿನ ಪರವೂರಿನ ಭಕ್ತರು ಅಪಾರ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗಿಯಾಗಿದ್ದು, ಸಮಾವೇಶಕ್ಕೂ ಕೂಡ ಬೃಹತ್ ಪ್ರಮಾಣದಲ್ಲಿ ಸೇರುವ ಸಾಧ್ಯತೆಯಿದೆ.