ಸುಲ್ಕೇರಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾ.ಪಂ ವ್ಯಾಪ್ತಿಯ ನಾವರ ಗ್ರಾಮದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ದಟ್ಟ ಅರಣ್ಯದ ಮಧ್ಯೆ ಕೇಡೇಲು ಎಂಬಲ್ಲಿ ಹಲವು ವರ್ಷಗಳಿಂದ ಅನಾರೋಗ್ಯದ ಸ್ಥಿತಿಯಲ್ಲಿ ವೃದ್ಧ ದಂಪತಿಗಳಾದ ಕೊರಗ ಮಲೆಕುಡಿಯ ಹಾಗೂ ಕಮಲ ಎಂಬವರು ಕೇವಲ ಇಬ್ಬರೇ ಸಣ್ಣ ಗುಡಿಸಲಿನಲ್ಲಿ ಅತ್ಯಂತ ಕಷ್ಟಕರವಾದ ಮನ ಕರಗುವ ಸ್ಥಿತಿಯಲ್ಲಿ ಹಾಸಿಗೆಯಲ್ಲಿ ಮಲಗಿಕೊಂಡೆ ಜೀವನವನ್ನು ಸಾಗಿಸಿಕೊಂಡು ಬರುತ್ತಿರುವುದನ್ನು ಕಂಡರೆ ಎಂತವರಿಗೂ ಕಣ್ಣೀರು ಬರಿಸುವಂತ ಘಟನೆ ಇದಾಗಿದೆ.
ಸುದ್ದಿ ತಿಳಿದ ತಕ್ಷಣ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೊಳಲಿ, ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರು, ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಗಂಗಾಧರ ಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ್ ಗೌಡ ಕೆರ್ವಾಶೆ, ಸಂಘಟನಾ ಕಾರ್ಯದರ್ಶಿ ಸುಂದರ ರೆಂಜಾಳ, ಪ್ರಮುಖರಾದ ಚಂದ್ರ ಕೆರ್ವಾಶೆ, ಸಂತೋಷ್ ನಾವರ, ಗೀತಾ ಪೊಳಲಿ, ಲಕ್ಷ್ಮಿ ಕೆರ್ವಾಶೆ ಮನೆಗೆ ಭೇಟಿ ನೀಡಿ, ತಕ್ಷಣ ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಯವರನ್ನು ಸಂಪರ್ಕ ಮಾಡಿ ಆಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ದಾಖಲು ಮಾಡಲಾಗಿ ಮಾನವೀಯತೆ ಮೆರೆಯಲಾಗಿದೆ.