

ಉಜಿರೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಉಜಿರೆಯ ಕೆಳಗಿನ ಪೇಟೆ ಸಮೀಪದ ರಸ್ತೆ ಬದಿಯಲ್ಲಿ ಬೃಹತ್ ಗಾತ್ರದ ಮರವೊಂದು ಹೆದ್ದಾರಿಗೆ ಅಪಾಯಕಾರಿ ಸ್ಥಿತಿಯಲ್ಲಿದೆ. ಮರವು ಸಂಪೂರ್ಣ ರಸ್ತೆಯತ್ತವಾಲಿದ್ದು, ಯಾವುದೇ ಕ್ಷಣದಲ್ಲಿ ಗಾಳಿ ಮಳೆಗೆ ಹೆದ್ದಾರಿಗೆ ಉರುಳಿ ವಾಹನಗಳ ಸಂಚಾರಕ್ಕೆ ತೊಡಕಾಗುವ ಸಂಭಾವ್ಯತೆ ಇದೆ.ಪ್ರಸ್ತುತ ನಿತ್ಯ ಗಾಳಿ-ಮಳೆ ಅಧಿಕವಾಗಿರುವ ಕಾರಣ ವಾಹನ ಚಾಲಕರು ಸಂಚಾರ ನಡೆಸಲು ಭಯ ಪಡುವಂತಾಗಿದೆ.
ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ,ಅನೇಕ ಪಾದಚಾರಿಗಳು, ವಿದ್ಯಾರ್ಥಿಗಳು ಸಂಚರಿಸುವ, ಅಂಗಡಿ, ಮಳಿಗೆಗಳು, ವಿದ್ಯುತ್ ಲೈನ್ ಇರುವ ಈ ಜಾಗದಲ್ಲಿ ಮರ ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದರೆ ಅನಾಹುತಗಳು ಉಂಟಾಗುವ ಸಾಧ್ಯತೆ ಹೆಚ್ಚು.ಈ ಪರಿಸರದಲ್ಲಿ ಮಳೆ ನೀರು ರಸ್ತೆ ಮೂಲಕವೇ ನದಿಯಂತೆ ಪ್ರವಹಿಸುವುದು ಮಾಮೂಲಾಗಿದ್ದು ಮರದ ಬುಡದ ಮಣ್ಣಿನ ಸವಕಳಿ ಅಧಿಕವಾಗಿ ಮರವು ದಿನದಿಂದ ದಿನಕ್ಕೆ ರಸ್ತೆಯತ್ತ ವಾಲುತ್ತಿರುವುದು ಕಂಡುಬರುತ್ತಿದೆ.
ಹಲವು ಅಪಾಯಕಾರಿ ಮರಗಳು: ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿಯಿಂದ ಚಾರ್ಮಾಡಿ ತನಕದ ಸುಮಾರು 20 ಕಿ. ಮೀ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನೂರಾರು ಅಪಾಯಕಾರಿ ಮರಗಳು ರಸ್ತೆಗೆ ಬಾಗಿಕೊಂಡಿವೆ.ಹೆಚ್ಚಿನ ಮರಗಳು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಳ್ಳುವಾಗ ತೆರವುಗೊಳ್ಳಬೇಕಾಗಿದೆ.ಈ ಮರಗಳನ್ನು ಈಗಾಗಲೇ ತೆರವಿಗೆ ಗುರುತಿಸಲಾಗಿದ್ದು ಈ ಬಾರಿಯ ಮಳೆ ಗಾಳಿಗೆ ಅನೇಕ ಮರಗಳು ಹೆದ್ದಾರಿ ಗುರುಳಿ ವಾಹನ ಸಂಚಾರ ಹಾಗೂ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದೆ.