ಉಜಿರೆ: ಕಳೆದ ವಾರವಿಡೀ ಜೋರಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ಚಾರ್ಮಾಡಿ ಘಾಟಿ ವಿಭಾಗಗಳಲ್ಲಿ ಉಂಟಾಗಿರುವ ರಸ್ತೆ ಹಾನಿ ಹಾಗೂ ಮುಂದೆ ಉಂಟಾಗಬಹುದಾದ ಸಂಚಾರ ಸಮಸ್ಯೆಗಳ ಬಗೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಜು.26ರಂದು ಪರಿಶೀಲನೆ ನಡೆಸಿದರು.
ಬಿ.ಸಿ.ರೋಡ್‌ನಿಂದ ಚಾರ್ಮಾಡಿವರೆಗೆ ಹಾಗೂ ದ.ಕ ವಿಭಾಗದ ಚಾರ್ಮಾಡಿ ಘಾಟಿಯ ತನಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ತಂಡ ಆಗಮಿಸಿ, ಅಲ್ಲಲ್ಲಿ ಇರುವ ರಸ್ತೆ ಅವ್ಯವಸ್ಥೆ ಹಾಗೂ ಸಂಚಾರ ಸಮಸ್ಯೆಗಳ ಕುರಿತು ಮಾಹಿತಿ ಕಲೆ ಹಾಕಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ವಿಭಾಗದ ಮೇಲಾಧಿಕಾರಿಗಳಿಗೆ ತಿಳಿಸಿದರು. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು ದ. ಕ ವಿಭಾಗದ ಘಾಟಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಬದಿಗಳಲ್ಲಿ ಕುಸಿಯುವ ಹಾಗೂ ಮರಗಳು ಉರುಳುವ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ.ಅಲ್ಲದೆ ಚಾರ್ಮಾಡಿ ಘಾಟಿ ವಿಭಾಗದ ಕೆಲವು ಕಡೆ ತಡೆಗೋಡೆಗಳಿಗೂ ಹಾನಿಯಾಗಿದೆ.ಕಳೆದ ವರ್ಷಗಳಲ್ಲಿ ಘಾಟಿ ಪ್ರದೇಶದಲ್ಲಿ ಕುಸಿತ ಉಂಟಾದ ಸ್ಥಳಗಳಲ್ಲಿ ಕಾಮಗಾರಿ ನಡೆಸಲಾಗಿದ್ದು ಇಲ್ಲಿ ಪ್ರಸ್ತುತ ಹೆಚ್ಚಿನ ಸಮಸ್ಯೆ ಇರುವುದಿಲ್ಲ.ಗುಡ್ಡ ಭಾಗದಿಂದ ಮಳೆ ನೀರು ರಭಸವಾಗಿ ಹರಿದು ಬರುವ ಕಾರಣ ಮರ, ಬಂಡೆ, ಗುಡ್ಡ ಕುಸಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇಂತಹ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಮಳೆ ನೀರು ರಸ್ತೆಯಲ್ಲಿ ಹರಿಯುವುದನ್ನು ಗಮನಿಸಿದ ಅಧಿಕಾರಿಗಳು ಅದಕ್ಕೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಬೆಂಗಳೂರು ವಲಯದ ರಾಷ್ಟ್ರೀಯ ಹೆದ್ದಾರಿ ಅಧೀಕ್ಷಕ ಇಂಜಿನಿಯರ್ ರಾಜೇಶ್, ದ.ಕ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಮಹಾಬಲ ನ್ಕಾ ಹಾಗೂ ಇತರರಿದ್ದ ತಂಡ ಇಲ್ಲಿಂದ ತೆರಳಿ ಸಂಪಾಜೆ- ಮಾಣಿ ಹೆದ್ದಾರಿಯಲ್ಲೂ ಸಮಸ್ಯೆ ಬಗೆಗೆ ಪರಿಶೀಲನೆ ನಡೆಸಿದರು.ಚಾರ್ಮಾಡಿ ಘಾಟಿ ಹಾಗೂ ಹೆದ್ದಾರಿ ರಸ್ತೆಗಳನ್ನು ಪರಿಶೀಲಿಸಿದ ಹಿರಿಯ ಅಧಿಕಾರಿಗಳು ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಅಗತ್ಯ ಸ್ಥಳಗಳಲ್ಲಿ ಯಂತ್ರೋಪಕರಣ, ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು, ಅಗತ್ಯ ಸ್ಥಳಗಳಲ್ಲಿ ಕಾಮಗಾರಿ ನಡೆಸಲು ಸೂಚನೆ ನೀಡಿದ್ದಾರೆ ಎಂದು ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ಚಿಕ್ಕಮಗಳೂರು ವಿಭಾಗದಲ್ಲಿ ಅಧಿಕ ಅಪಾಯ: ಚಾರ್ಮಾಡಿ ಘಾಟಿ ಪ್ರದೇಶದ ಚಿಕ್ಕಮಗಳೂರು ವಿಭಾಗದಲ್ಲಿ ಅಧಿಕ ಅಪಾಯ ಇದೆ. ಈಗಾಗಲೇ ಮೂರು ದಿನಗಳ ಹಿಂದೆ ಅಲ್ಲಿ ಗುಡ್ಡ ಕುಸಿದು ಸಂಚಾರ ವ್ಯತ್ಯಯ ಉಂಟಾಗಿತ್ತು.ರಸ್ತೆಯಿಂದ ಮಣ್ಣನ್ನು ತೆರೆವುಗೊಳಿಸಿ ಬಳಿಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.ತಡೆಗೋಡೆಗಳ ಕಾಮಗಾರಿ ಅರೆಬರೆಯಾಗಿ ಮಾಡಿರುವುದರಿಂದ ರಸ್ತೆ ಅಗಲ ಕಿರಿದಾಗಿ, ರಸ್ತೆ ಬದಿ ಸಾಕಷ್ಟು ಆಳದ ಕಣಿವೆಗಳು ಕಂಡುಬರುತ್ತವೆ. ಈ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳ ಲಾಗಿಲ್ಲ.ಮಂಜು ಕವಿದ ವಾತಾವರಣವಿರುವ ಈ ಭಾಗದಲ್ಲಿ ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ರಸ್ತೆಯುದ್ದಕ್ಕೂ ಖಾಸಗಿ ವಾಹನಗಳನ್ನು ಬೇಕಾ ಬಿಟ್ಟಿ ಪಾರ್ಕಿಂಗ್ ಮಾಡುವ ಪ್ರವಾಸಿಗರು ವಾಹನ ಸಂಚಾರಕ್ಕೆ ಸದಾ ಅಡ್ಡಿಯಾಗುತ್ತಿದ್ದಾರೆ.ಸದ್ಯ ಚಿಕ್ಕಮಗಳೂರು ವಿಭಾಗದ ಕೆಲವು ಪ್ರದೇಶದಲ್ಲಿ ಚರಂಡಿ ದುರಸ್ತಿ ಇನ್ನಿತರ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.