ಕುತ್ಲೂರು: ಕಾಡಬಾಗಿಲು ಸೇತುವೆ ಕುಸಿತ- ಸಂಕಷ್ಟದಲ್ಲಿ ಅರಣ್ಯವಾಸಿಗಳು

0

ಕುತ್ಲೂರು: ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ, ಪಂಜಾಲು ಮೊದಲಾದ ಕಡೆಗೆ ಸಂಪರ್ಕಿಸುವ ಕಾಡಬಾಗಿಲು ಎಂಬಲ್ಲಿಯ ಸೇತುವೆ ಜು.26 ರಂದು ಕುಸಿದಿದೆ.

ಸುಮಾರು 30 ಅರಣ್ಯವಾಸಿ ಮಲೆಕುಡಿಯ ಮತ್ತು ಇತರ ಅರಣ್ಯವಾಸಿ ಕುಟುಂಬಗಳಿಗೆ ಸಂಪರ್ಕಿಸುವ ಸೇತುವೆ ಇದಾಗಿತ್ತು.ಸುಮಾರು 50 ವರ್ಷದ ಹಿಂದೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ಸೇತುವೆಯ ಮಧ್ಯದ ಪಿಲ್ಲರ್ ಕುಸಿದಿದೆ. ಅರಣ್ಯವಾಸಿಗಳು ಈ ಸೇತುವೆ ಮೂಲಕವೇ ಸಂಚಾರ ಮಾಡುತ್ತಿದ್ದರು. ಇದೀಗ ಸೇತುವೆ ಕುಸಿದಿರುವುದರಿಂದ ತೊಂದರೆಯಾಗಿದೆ. ಇನ್ನು ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯ ನಿರ್ಮಾಣವಾಗಿದೆ.

ಅರಣ್ಯವಾಸಿಗಳಿಗೆ ಸಂಚಾರಿ ವಾಹನದ ಮೂಲಕ ಅಳಂಬ ಪ್ರದೇಶಕ್ಕೆ ಪಡಿತರ ವಿತರಣೆಯಾಗುತ್ತಿತ್ತು. ಈ ಸೇತುವೆ ಕುಸಿತವಾಗಿರುವುದರಿಂದ ಇನ್ನು ಪಡಿತರ ಸೇರಿದಂತೆ ಇನ್ನಿತರ ವಸ್ತುಗಳನ್ನೂ ಕಾಲ್ನಡಿಗೆಯಲ್ಲೇ ಹೊತ್ತೊಯ್ಯುವ ಅನಿವಾರ್ಯ ಬರಲಿದೆ. ತುರ್ತು ಸಂದರ್ಭಗಳಲ್ಲೂ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಮೂರು ವರ್ಷದ ಹಿಂದೆ ಕುಕ್ಕುಜೆ ಸಮೀಪದ ಸೇತುವೆ ಇದೇ ರೀತಿ ಕುಸಿತವಾಗಿತ್ತು. ನಂತರ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ಕಾಡಬಾಗಿಲು ಸೇತುವೆಯನ್ನೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೂ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಇದೀಗ ಸೇತುವೆ ಕುಸಿತ ಆಗಿರುವುದರಿಂದ ಸಂಪರ್ಕವೇ ಸಾಧ್ಯವಿಲ್ಲದಂತಾಗಿದೆ.

ಕಾಡಬಾಗಿಲು ಸೇತುವೆಯನ್ನು ತಕ್ಷಣವೇ ನಿರ್ಮಾಣ ಮಾಡಬೇಕು. ಅರಣ್ಯವಾಸಿಗಳಿಗೆ ಸಂಚರಿಸಲು ತೊಂದರೆಯಾಗದಂತೆ ಕ್ರಮ ವಹಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿ ಚೀಂಕ್ರ ಮಲೆಕುಡಿಯ ಬರೆಂಗಾಡಿ ಒತ್ತಾಯಿಸಿದರು

LEAVE A REPLY

Please enter your comment!
Please enter your name here