ಬೆಳ್ತಂಗಡಿ: ಇಲ್ಲಿನ ಮುಖ್ಯ ರಸ್ತೆಯ ಸೇತುವೆ ಬಳಿ, ದಾಮೋಧರ ಆಸ್ಪತ್ರೆ ಪಕ್ಕದ ನಿವಾಸಿ ನಗರದ ಹಿರಿಯ ಹೊಟೇಲ್ ಉದ್ಯಮಿಯಾಗಿದ್ದ ಅಬೂಬಕ್ಕರ್ (56) ಅವರು ಕರ್ತವ್ಯದಲ್ಲಿರುವಂತೆಯೇ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಜು.24 ರಂದು ನಡೆದಿದೆ.
ಮೂಲತಃ ಬಂಗಾಡಿ ನಿವಾಸಿ: ಇಬ್ರಾಹಿಂ ಮತ್ತು ಖತೀಜಮ್ಮ ದಂಪತಿಯ ದ್ವಿತೀಯ ಪುತ್ರರಾಗಿದ್ದ ಅಬೂಬಕ್ಕರ್ ಅವರು ಬೆಳ್ತಂಗಡಿಯಲ್ಲಿ ಸುಮಾರು 30 ವರ್ಷಗಳಿಂದ ಬೆಳ್ತಂಗಡಿ ಭಾರತ್ ಬೀಡಿ ಕಚೇರಿಯ ಮುಂಭಾಗದಲ್ಲಿ ಸ್ವಪ್ನ ಎಂಬ ಹೆಸರಿನ ಹೊಟೇಲ್ ನಡೆಸುತ್ತಿದ್ದರು. ಬೆಳಿಗ್ಗೆ ಎಂದಿನಂತೆ ಕರ್ತವ್ಯದಲ್ಲಿರುವ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕೆಲಸದಾಳು ನಿಝಾರ್, ಪಕ್ಕದ ಗೇರೇಜ್‌ನ ಪ್ರವೀಣ್ ಮತ್ತಿತರರು ಲಾಯಿಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವರಿಗೆ ಹೃದಯಾಘಾತವಾಗಿ ಮಧ್ಯಾಹ್ನದ ವೇಳೆ ಕೊನೆಯುಸಿರೆಳೆದರು.
ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದ ಅವರು, ಹೊಟೇಲ್‌ಗೆ ಕೈಚಾಚಿ ಬರುವ ಅನೇಕ ಮಂದಿ ಭಿಕ್ಷುಕರಿಗೆ ಉಚಿತವಾಗಿ ಊಟ ನೀಡುತ್ತಿದ್ದರು.
ಮೃತರು ತಾಯಿ ಖತೀಜಮ್ಮ, ಪತ್ನಿ ಆಝ್‌ರಾ, ಇಬ್ಬರು ಹೆಣ್ಣು ಮಕ್ಕಳಾದ ರೈಹಾನಾ ಮತ್ತು ಅಫ್ರೀನಾ, ಓರ್ವ ಪುತ್ರ ಮುಹಮ್ಮದ್ ತೌಫೀಕ್, ಸಹೋದರರಾದ ಯೂಸುಫ್, ಉಮರ್ ಮತ್ತು ಉಸ್ಮಾನ್, ಸಹೋದರಿಯರಾದ ಮೈಮುನಾ ಮತ್ತು ಝುಬೈದಾ ಹಾಗೂ ಬಂದುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಮಂಗಳವಾರ ಬೆಳಗ್ಗೆ ನಡೆಯಿತು.