ಮದ್ಯವರ್ಜಿಸುವುದು ಪ್ರತಿಷ್ಠೆಯ ಪ್ರತೀಕ: ಡಾ||ಡಿ.ವೀರೇಂದ್ರ ಹೆಗ್ಗಡೆ

0

ಉಜಿರೆ: ಮದ್ಯವರ್ಜನ ಶಿಬಿರಗಳಿಗೆ ರಾಜ್ಯಾದ್ಯಂತ ಅನೇಕ ಜನರು ಚಟಮುಕ್ತರಾಗಲು ಬರುವುದನ್ನು ಗಮನಿಸಿದಾಗ ವ್ಯಸನಕ್ಕೆ ಯಾವುದೇ ಜಾತಿ ಮತ, ಧರ್ಮದ ವ್ಯಕ್ತಿಗಳು ಭೇದವಿಲ್ಲದೆ ಬಲಿ ಬೀಳುತ್ತಾರೆಂಬ ಸತ್ಯ ಅರ್ಥವಾಗುತ್ತದೆ.ಯಾವುದೇ ವ್ಯಸನಕ್ಕೆ ಬಲಿ ಬೀಳುವುದು ಸುಲಭ.ಆದರೆ ಅದರಿಂದ ಹೊರಬರಲು ಅತ್ಯಂತ ಕಷ್ಟವಾಗುತ್ತದೆ.ನಿರ್ದಿಷ್ಟವಾದ ಗುರಿ, ಅತ್ಯುತ್ತಮವಾದ ಜೀವನದ ಉದ್ದೇಶ ಹೊಂದಿರುವ ಪ್ರತಿಯೊಬ್ಬರು ಮನೋನಿಗ್ರಹ, ಅಚಲವಾದ ವಿಶ್ವಾಸದೊಂದಿಗೆ ವ್ಯಸನಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಮದ್ಯವರ್ಜಿತರು ಸಾವಿರಾರು ಮಂದಿ ಇಂದು ಸಂತೋಷದಿಂದ ಬಾಳುತ್ತಿದ್ದಾರೆ.

ಉತ್ತಮ ಸಾಧನೆಯೊಂದಿಗೆ ಇತರರಿಗೆ ಮಾದರಿಯಾಗಿರುವುದು ಅಲ್ಲದೆ ಸಮಾಜ ಸೇವೆಯನ್ನು ಮಾಡಿ ಕ್ಷೇತ್ರಕ್ಕೆ ಆಗಮಿಸಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ನವಜೀವನದ ಗುರುತಿನ ಚೀಟಿಯನ್ನು ಹಾಕಿಕೊಂಡು ಮದ್ಯವರ್ಜಿತನಾಗಿದ್ದೇನೆಂಬ ವಿಷಯವನ್ನು ಬಹಳ ಧೈರ್ಯದಿಂದ ಮತ್ತು ಸಂತೋಷದಿಂದ ಹೇಳುತ್ತಾರೆ.ಇದನ್ನು ಗಮನಿಸಿದಾಗ ಮದ್ಯವರ್ಜಿಸುವುದು ಪ್ರತಿಷ್ಠೆಯ ಪ್ರತೀಕವೆಂಬಂತೆ ವ್ಯಸನಿಗಳು ತಿಳಿದುಕೊಂಡಿರುವುದು ಪ್ರಗತಿಯ ಸಂಕೇತವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಶಿಬಿರಾರ್ಥಿಗಳಿಗೆ ಆಶೀರ್ವಚನಗೈದರು.ಅವರು ಉಜಿರೆ, ಲಾಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಯುತ್ತಿರುವ 205ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಜು.24ರಂದು ಆಗಮಿಸಿ ಮಾರ್ಗದರ್ಶನ ನೀಡಿದರು.ಶಿಬಿರದಲ್ಲಿ ವಿವಿಧ ಜಿಲ್ಲೆಗಳ 71 ಮಂದಿ ಶಿಬಿರಾರ್ಥಿಗಳು ದಾಖಲಾಗಿದ್ದರು.

ಶಿಬಿರದ ಕುಟುಂಬದಿನ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ನಡೆಸಿಕೊಟ್ಟರು.ಶಿಬಿರದ ಮನೋವೈದ್ಯಕೀಯ ಚಿಕಿತ್ಸೆಯನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆ ಆಸ್ಪತ್ರೆ, ದೇರಳಕಟ್ಟೆಯ ಡಾ|ಶ್ರೀನಿವಾಸ್ ಭಟ್ ರವರ ನೇತೃತ್ವದಲ್ಲಿ ಮಾಡಲಾಯಿತು.ವೈದ್ಯಾಧಿಕಾರಿಯಾಗಿ ಶ್ರೀ ಧರ್ಮಸ್ಥಳ ಆಸ್ಪತ್ರೆ ಉಜಿರೆಯ ಡಾ|ಬಾಲಕೃಷ್ಣ ಭಟ್‌ರವರು, ಕೊಕ್ಕಡದ ಡಾ| ಮೋಹನ್‌ದಾಸ್ ಗೌಡ ಆಗಮಿಸಿ ಸಹಕರಿಸಿರುತ್ತಾರೆ. ಶಿಬಿರದಲ್ಲಿ ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ಕುಮಾರ್ ಟಿ., ಆರೋಗ್ಯ ಸಹಾಯಕ ಫಿಲೋಮಿನಾ ಡಿ.ಸೋಜರವರು ಸಹಕರಿಸಿರುತ್ತಾರೆ.ಮುಂದಿನ ವಿಶೇಷ ಶಿಬಿರವು ಆ.7ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here