ಬೆಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಶೇಕ್ ಲತೀಫ್ ನೇಮಕ

0

ಬೆಳ್ತಂಗಡಿ: ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ (ಆಡಳಿತ) ಮೂಲತಃ ಬೆಳ್ತಂಗಡಿ ತಾಲೂಕು ಉಜಿರೆಯ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಶೇಕ್ ಲತೀಫ್ ಅಧಿಕಾರ ಸ್ವೀಕರಿಸಿದ್ದಾರೆ.

ಕೆಎಎಸ್ ಅಧಿಕಾರಿಯಾಗಿರುವ ಶೇಕ್ ಲತೀಫ್ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಣಕಾಸು ಸದಸ್ಯರಾಗಿದ್ದರು. ಪ್ರಾರಂಭದಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ವಿಭಾಗದ ಸಹಾಯಕ ನಿಯಂತ್ರಣ ಅಧಿಕಾರಿಯಾಗಿದ್ದ ಶೇಕ್ ಲತೀಫ್ ಪದವಿಪೂರ್ವ ಶಿಕ್ಷಣ ಇಲಾಖಾ ಲೆಕ್ಕಾಧಿಕಾರಿಯಾಗಿ, ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಯಾಗಿ, ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಹಣಾಧಿಕಾರಿಯಾಗಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಆರ್ಥಿಕ ಸಲಹೆಗಾರರಾಗಿ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರದಾನ ವ್ಯವಸ್ಥಾಪಕರಾಗಿ (ಆರ್ಥಿಕ) ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಇವರು ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಪ್ರಸ್ತುತ ಅದರ ಫೆಲೋ ಮೆಂಬರ್ (ಎಫ್.ಸಿ.ಎಸ್.) ಆಗಿರುತ್ತಾರೆ. ಬಹುಶಃ ರಾಜ್ಯದಲ್ಲೇ ಬೆರಳೆಣಿಕೆಯ ಅಧಿಕಾರಿಗಳಿಗೆ ಮಾತ್ರ ಈ ಸ್ಥಾನ ಲಭಿಸಿದ್ದು, ಆ ಸಾಲಿನಲ್ಲಿ ಶೇಕ್ ಲತೀಫ್ ಕೂಡಾ ಓರ್ವರು. 1995-96ರಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಬಿ.ಕಾಂ ನಲ್ಲಿ ಎರಡನೇ ರ್ಯಾಂಕ್ ಪಡೆದಿರುವ ಶೇಕ್ ಲತೀಫ್ ಬಿ.ಕಾಂ. (ಕಾನೂನು ಮತ್ತು ಬ್ಯಾಂಕಿಂಗ್ ಅಭ್ಯಾಸ) ದಲ್ಲಿ ಅತ್ಯಧಿಕ ಅಂಕ ಪಡೆದು ಎ.ಬಿ.ಶೆಟ್ಟಿ ಸ್ಮಾರಕ ಚಿನ್ನದ ಪದಕ ಪಡೆದಿದ್ದರು. 97-98ರಲ್ಲಿ ಎಂ.ಬಿ.ಎ. ಯಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಗೋಲ್ಡ್ ಮೆಡಲ್ ಗೆ ಭಾಜನರಾಗಿದ್ದರು. ವೈಶ್ಯ ಬ್ಯಾಂಕ್ ಕೂಡಾ ಈ ಸಂದರ್ಭ ಚಿನ್ನದ ಪದಕ ನೀಡಿ ಗೌರವಿಸಿತ್ತು. 1995ರಲ್ಲಿ 800 ಮೀಟರ್ ಓಟದಲ್ಲಿ ಕೂಡಾ ಮಂಗಳೂರು ವಿ.ವಿ. ಗೆ ಪ್ರಥಮರಾಗಿ ಚಿನ್ನದ ಪದಕ ಪಡೆದಿದ್ದ ಶೇಕ್ ಲತೀಫ್ ರಾಷ್ಟ್ರಮಟ್ಟದ ಗುಡ್ಡಗಾಡು ಓಟದಲ್ಲಿ ಎರಡು ಬಾರಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದು, ಒಂದು ಬಾರಿ ವಿ.ವಿ. ತಂಡದ ನಾಯಕರಾಗಿದ್ದರು.

ಬೆಳ್ತಂಗಡಿ ತಾಲೂಕಿನ ಉಜಿರೆಯ ಓಡಲ ನಿವಾಸಿ ಶೇಕ್ ಪಕೀರ್ ಸಾಹೇಬ್ ಹಾಗೂ ರಶೀದಾಬಿ ದಂಪತಿ ಪುತ್ರನಾಗಿರುವ ಶೇಖ್ ಲತೀಫ್ ಉಜಿರೆಯ ದೊಂಪದಪಲ್ಕೆ ಓಡಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದವರು. ಹತ್ತನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸಗೈದವರು. ಪ್ರೌಢ, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ (ಎಸ್.ಡಿ.ಎಂ.) ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ತೇರ್ಗಡೆಯಾಗಿದ್ದಾರೆ.

1998ನೇ ಸಾಲಿನ ಗಜೆಟೆಡ್ ಪ್ರೊಬೆಷನರಿ ಅಧಿಕಾರಿಯಾಗಿದ್ದು, ಹುದ್ದೆ ಬದಲಾವಣೆಯಿಂದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಕಂದಾಯ ಇಲಾಖೆಗೆ ತಹಶೀಲ್ದಾರ್ ಆಗಿ ಬದಲಾವಣೆ ಹೊಂದಿ ನಂತರ ಸಹಾಯಕ ಆಯುಕ್ತರಾಗಿ (ಕೆಎಎಸ್ ಕಿರಿಯ ಶ್ರೇಣಿ), ಬಳಿಕ ಹಿರಿಯ ಶ್ರೇಣಿ ಹಾಗೂ ಪ್ರಸ್ತುತ ಕೆಎಎಸ್ ಆಯ್ಕೆ ಶ್ರೇಣಿಗೆ ಪದೋನ್ನತಿ ಹೊಂದಿದ್ದಾರೆ.

p>

LEAVE A REPLY

Please enter your comment!
Please enter your name here