ಮಡಂತ್ಯಾರು: ಮಗು ಮಣ್ಣಿನ ಮುದ್ದೆ ಇದ್ದಂತೆ ಇದಕ್ಕೆ ರೂಪ ಕೊಡುವ ಮಹತ್ತರ ಜವಾಬ್ದಾರಿ ಹೆತ್ತವರದ್ದು. ಮಕ್ಕಳು ಸನ್ಮಾರ್ಗದಲ್ಲಿ ಹೋಗುವ ಅವಕಾಶವನ್ನು ಶಿಕ್ಷಕರು ಹಾಗೂ ಹೆತ್ತವರು ಕಲ್ಪಿಸಿಕೊಡಬೇಕು. ಒಂದು ದೇಶವನ್ನು ಕಟ್ಟುವುದು ಸುಲಭ ಆದರೆ ಮಗುವಿಗೆ ಜನ್ಮ ಕೊಟ್ಟು ಸುಂದರ ವ್ಯಕ್ತಿಯನ್ನಾಗಿ ಮಾಡುವುದು ತುಂಬಾ ಶ್ರಮದ ಕೆಲಸ.ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ರಾಜಕುಮಾರ, ರಾಜಕುಮಾರಿಯಂತೆ ಬೆಳೆಸಬೇಕು ಏಕೆಂದರೆ ಮಕ್ಕಳು ದೇವರು ಕೊಟ್ಟ ಶ್ರೇಷ್ಠ ವರವಾಗಿದೆ ಎಂದು ಪೊಂಪೈ ಪದವಿ ಕಾಲೇಜು ತಾಳಿಪಾಡಿ ಐಕಳ ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಡಾ| ಕ್ಲೇರೆನ್ಸ್ ಮಿರಾಂದ ಹೇಳಿದರು.
ಅವರು ಇತ್ತೀಚೆಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನಲ್ಲಿ ಜರುಗಿದ ಪ್ರಸಕ್ತ ಸಾಲಿನ ಪ್ರೌಢ ಶಾಲಾ ಹಾಗೂ ಪ.ಪೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹೆತ್ತವರು ದಿನದಲ್ಲಿ ಕೆಲ ಸಮಯವಾದರೂ ತಮ್ಮ ಮಕ್ಕಳ ಜೊತೆಗೆ ಕಳೆಯಬೇಕು, ತಮ್ಮ ಮಗುವನ್ನು ಇನ್ನೊಂದು ಮಗುವಿನ ಜೊತೆಗೆ ಯಾವತ್ತೂ ಹೋಲಿಸಬಾರದು. ಮಕ್ಕಳ ಮುಂದೆ ದುಶ್ಚಟಗಳಿಗೆ ಒಳಗಾಗಬಾರದು. ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಒಲವು ಬರುವಂತೆ ಹೆತ್ತವರು ಮಾಡಬೇಕು. ಗುರು ಹಿರಿಯರು ಸರಿ ತಪ್ಪುಗಳು ಯಾವುದು ಎಂಬ ಅರಿವನ್ನು ಮೂಡಿಸಬೇಕು. ತಮ್ಮ ಮಕ್ಕಳು ಪ್ರೀತಿ, ಸ್ನೇಹ, ಸೌಹಾರ್ದತೆಯ ಸಮಾಜದ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವುದು ಹೆತ್ತವರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಸ್ಟ್ಯಾನಿ ಗೋವಿಯಸ್ ಅಧ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲ ವಂ| ಜೆರೊಮ್ ಡಿಸೋಜಾ ಹಿಂದಿನ ಸಭೆಯ ವರದಿ ವಾಚಿಸಿ ಸಂಸ್ಥೆಯ ಶೈಕ್ಷಣಿಕ ಪ್ರಗತಿಯ ಕುರಿತು ಮಾಹಿತಿ ನೀಡಿದರು.
ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನ ಮಂಡಳಿಯ. ಉಪಾಧ್ಯಕ್ಷ ಜೆರಾಲ್ಡ್ ಮೋರಸ್,ಪ್ರೌಢ ಶಾಲಾ ಹಾಗೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ಪೂಜಾರಿ, ಕುಮಾರ್ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಸಕ್ತ ಸಾಲಿನ ಪ್ರೌಢ ಶಾಲಾ ಹಾಗೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಪ್ರೌಢಶಾಲಾ ವಿಭಾಗಕ್ಕೆ ವಿನೋದ್ ರಾಕೇಶ್ ಡಿಸೋಜ ಹಾಗೂ ಕಾಲೇಜು ವಿಭಾಗಕ್ಕೆ ಲಿಯೋ ರೊಡ್ರಿಗಸ್ ನೂತನ ಉಪಾಧ್ಯಕ್ಷರುಗಳಾಗಿ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ರಸ್ತೆ ಸಾರಿಗೆ ಸುರಕ್ಷತೆ ಮತ್ತು ನಿಯಮಗಳು ಎಂಬ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಓಡಿಯಪ್ಪ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮೋಹನ್ ನಾಯಕ್ ಸ್ವಾಗತಿಸಿದರು. ಪ್ರೌಢ ಶಾಲಾ ಹಾಗೂ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ 2022-23 ನೇ ಸಾಲಿನ ಲೆಕ್ಕ ಪತ್ರವನ್ನು ಶಿಕ್ಷಕಿ ಶಾಂತಿ ಮೇರಿ ಡಿಸೋಜಾ ಹಾಗೂ ಉಪನ್ಯಾಸಕರಾದ ವಿನ್ಸೆಂಟ್ ರೊಡ್ರಿಗಸ್ ಮಂಡಿಸಿದರು. ಉಪನ್ಯಾಸಕಿಯರಾದ ಸರಿತಾ ಶೆರಿಲ್ ಅಲ್ಮೇಡ ವಂದಿಸಿ, ಸುಚಿತ್ರಾಕಲಾ ಶೆಟ್ಟಿ ಹಾಗೂ ಅಶ್ವಿನಿ.ಪಿ ಕಾರ್ಯಕ್ರಮ ನಿರೂಪಿಸಿದರು.