ಬೆಳಾಲು: ಶ್ರೀ ಧ.ಮ.ಪ್ರೌಢ ಶಾಲೆಯ ಭಿತ್ತಿಗಳಲ್ಲಿ ಪ್ರಪಂಚ ದರ್ಶನ

0

ಬೆಳಾಲು: ಉಜಿರೆ ಶ್ರೀ ಧ ಮಂ ಎಜ್ಯುಕೇಶನಲ್ ಸೊಸೈಟಿ ರಿ.ಇದರ ಆಳ್ವಿಕೆಗೊಳಪಟ್ಟ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯು ಜಲಮರುಪೂರಣ, ಕಲಾಗ್ಯಾಲರಿಯಂತಹ ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳಿಗಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಗುರುತಿಸಿಕೊಂಡಿರುವ ಪ್ರೌಢಶಾಲೆಯಾಗಿದೆ.ಇದಕ್ಕೆ ಪೂರಕವಾಗಿ, ಶಾಲೆಯ ಕೀರ್ತಿಯ ಮುಕುಟಕ್ಕೆ ಗರಿ ತೊಡಿಸಿದಂತೆ ಇದೀಗ ಶಾಲಾ ಸಭಾಂಗಣದ ಭಿತ್ತಿಯನ್ನೆಲ್ಲ ಅಲಂಕರಿಸಿರುವ ಪ್ರಪಂಚದ ನಕಾಶೆಗಳು, ವಿದ್ಯಾರ್ಥಿಗಳಿಗೆ ನಿತ್ಯ ಪ್ರಪಂಚ ದರ್ಶನವನ್ನು ಮಾಡಿಸುತ್ತಿದೆ. ನೋಡುಗರ ಪಾಲಿಗೆ ಆಕರ್ಷಣೀಯ ತಾಣವಾಗಿದೆ.

ದಾನಿಗಳ ಮತ್ತು ಹಳೆ ವಿದ್ಯಾರ್ಥಿಗಳ ಕೊಡುಗೆಯ ಮೂಲಕ ಈ ಶೈಕ್ಷಣಿಕ ಯೋಜನೆ ರೂಪು ತಳೆದಿದೆ. ಇದರಲ್ಲಿ ಬೆಳ್ತಂಗಡಿ ತಾಲೂಕಿನಿಂದ ತೊಡಗಿ, ದ ಕ ಜೆಲ್ಲೆ, ಕರ್ನಾಟಕ ರಾಜ್ಯ, ಭಾರತ…ಹೀಗೆ ಏಳು ಖಂಡಗಳವರೆಗೆ, ರಾಜಕೀಯ ಮತ್ತು ಭೌಗೋಳಿಕ ಚಿತ್ರಣಗಳ ಇಪ್ಪತ್ತು ನಕಾಶೆಗಳು ವಿದ್ಯಾರ್ಥಿಗಳಿಗೆ ನಿಂತಲ್ಲೇ ಪ್ರಪಂಚ ದರ್ಶನ ಮಾಡಿಸುತ್ತಿವೆ.

ವಿದ್ಯಾರ್ಥಿಗಳು ಯಾವುದೇ ಹೊತ್ತಿನಲ್ಲಿ ಬಂದರೂ ಮುಕ್ತವಾಗಿ ವೀಕ್ಷಿಸಬಹುದಾದ ಭೂಪಟಗಳ ಗ್ಯಾಲರಿ ಇದು. ನಕಾಶೆಗಳ ಮೂಲಕ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳ ನಗರಗಳು, ಮುಖ್ಯ ಪಟ್ಟಣಗಳು, ನದಿಗಳು, ಪರ್ವತಗಳು, ಬಯಲು ಪ್ರದೇಶಗಳು, ಸಮುದ್ರಗಳು, ಸಂಪರ್ಕ ಜಾಲಗಳು, ಅಕ್ಷಾಂಶ ರೇಖಾಂಶಗಳು ಇತ್ಯಾದಿ ಮಾಹಿತಿಗಳನ್ನು ಪ್ರತ್ಯಕ್ಷೀಕರಿಸಿಕೊಳ್ಳಬಹುದು. ಇಲ್ಲಿನ ಮಕ್ಕಳು ನಿಜಕ್ಕೂ ಭಾಗ್ಯವಂತರು.
ಮುಖ್ಯವಾಗಿ ಸಮಾಜ ಪಾಠಕ್ಕೇ ಸಂಬಂಧಿತ ಚಟುವಟಿಕೆ ಇದಾದರೂ ಅದರಾಚೆಗಿನ ಅನಂತ ಅವಕಾಶಗಳ ಆಕಾಶ ದರ್ಶನ ಈ ನಕ್ಷೆಗಳಿಂದ ಸಾಧ್ಯ.

ಕಲಿಕೆ ಪ್ರಾಯೋಗಿಕವಾಗಿರಬೇಕು, ಅನುಭವ ನೀಡಬೇಕು, ಸ್ವ ಕಲಿಕೆಗೆ ಪ್ರೇರಣೆ ನೀಡಬೇಕು ಎಂಬಿತ್ಯಾದಿಗಳು ಕಲಿಕೆಯ ಆಶಯಗಳಾಗಿವೆ. ಇದಕ್ಕೆ ನಿದರ್ಶನವಾಗಿ ಬೆಳಾಲು ಪ್ರೌಢಶಾಲೆಯಲ್ಲಿ ಅಳವಡಿಸಿರುವ ಭೂಪಟಗಳು ಮಕ್ಕಳ ಚಿತ್ತ ಭಿತ್ತಿಯಲ್ಲಿ ಸದಾ ವರ್ಣಮಯ ನೆನಪುಗಳನ್ನು ಬಿತ್ತುವುದರಲ್ಲಿ ಸಂಶಯವಿಲ್ಲ.

ಮುಖ್ಯೋಪಾಧ್ಯಾ ರಾಮಕೃಷ್ಣ ಭಟ್ ಚೊಕ್ಕಾಡಿಯವರ ಶೈಕ್ಷಣಿಕ ಮುನ್ನೋಟದ ಚಿಂತನೆಯ ಪ್ರತೀಕವಾಗಿ, ಶಿಕ್ಷಕ ಸಿಬ್ಬಂದಿಗಳೆಲ್ಲರ ಪೂರಕ ದುಡಿಮೆಯ ಫಲವಾಗಿ ಇದೀಗ ಬೆಳಾಲು ಪ್ರೌಢಶಾಲೆಯು “ನೋಡಿ ತಿಳಿ ಮಾಡಿ ಕಲಿ” ಎಂಬ ಹೇಳಿಕೆಗೆ ಮಾದರಿಯಾಗಿ ರೂಪುಗೊಂಡಿದೆ, ಜನಾಕರ್ಷಣೆಯ ಕೇಂದ್ರವಾಗಿ ಬೆಳೆದಿದೆ.

ಶ್ರೀ ಧ.ಮ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ, ಕಾರ್ಯದರ್ಶಿಗಳಾದ ಡಿ ಹರ್ಷೇಂದ್ರ ಕುಮಾರ್ ರವರ ಸಮರ್ಥ ನಿರ್ದೇಶನದದಲ್ಲಿ ಈಗಾಗಲೇ ಈ ಶಾಲೆಯ ತರಗತಿಗಳೆಲ್ಲ ಸ್ಮಾರ್ಟ್ ಕ್ಲಾಸುಗಳಾಗಿವೆ.

ಸಂಪೂರ್ಣ ಉಚಿತ ಶಿಕ್ಷಣದೊಂದಿಗೆ ಸುಸಜ್ಜಿತವಾದ ಉಚಿತ ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆಯೇ ಮೊದಲಾದ ಶೈಕ್ಷಣಿಕ ವ್ಯವಸ್ಥೆಗಳಿಂದ ಶಿಕ್ಷಣಾಸಕ್ತರ ಗಮನಸೆಳೆದಿದೆ.

p>

LEAVE A REPLY

Please enter your comment!
Please enter your name here