ಉಜಿರೆ: ರಾಷ್ಟ್ರೀಯ ಮಾನ್ಯತಾ ಸಂಸ್ಥೆ NAAC ನಿಂದ A++ ಶ್ರೇಣಿಯನ್ನು ಪಡೆದಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ 24ನೇ ಯೋಜನಾಧಿಕಾರಿಯಾಗಿ ಡಾ.ಮಹೇಶ್ ಕುಮಾರ್ ಶೆಟ್ಟಿ.ಹೆಚ್ ಅಧಿಕಾರ ಸ್ವೀಕರಿಸಿದರು.
ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಕಾಲೇಜಿನ ಪ್ರತಿಷ್ಠಿತ ಎನ್ಎಸ್ಎಸ್ ಘಟಕದ ಯೋಜನಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಇವರು ಕಳೆದ 14 ವರ್ಷಗಳಿಂದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವಿಸಲ್ಲಿಸುತ್ತಿದ್ದಾರೆ.ತುಮಕೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಇವರು ಈಗಾಗಲೇ ಕಾಲೇಜಿನ ವಿವಿಧ ಸಮಿತಿಗಳಲ್ಲಿ ಜವಾಬ್ದಾರಿಗಳನ್ನ ನಿರ್ವಹಿಸಿದ್ದಾರೆ.ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆ ಜೆ ಸಿ ಐ ಉಜಿರೆ ಘಟಕದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಮತ್ತು ಜೆಸಿಐನ ವ್ಯಕ್ತಿತ್ವ ವಿಕಸನದ ರಾಜ್ಯಮಟ್ಟದ ತರಬೇತುದಾರರಾಗಿಯೂ ಅನುಭವ ಹೊಂದಿರುವ ಇವರು ಬೆಳ್ತಂಗಡಿ ತಾಲೂಕಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ವೇದಿಕೆ ‘ಸಮೂಹ ಉಜಿರೆ’ ಇದರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಯೋಜನಾಧಿಕಾರಿ ಡಾ.ಕೆ.ಎಸ್.ಲಕ್ಷ್ಮಿ ನಾರಾಯಣ್ ಇವರಿಂದ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಯಾಗಿ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಡಾ. ಬಿ ಎ ಕುಮಾರ್ ಹೆಗ್ಡೆ ನೂತನ ಯೋಜನಾಧಿಕಾರಿಗಳಿಗೆ ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎನ್ಎಸ್ಎಸ್ ಘಟಕದ ಸಹ ಯೋಜನಾಧಿಕಾರಿ ಶ್ರೀಮತಿ ದೀಪಾ ಆರ್ ಪಿ ಉಪಸ್ಥಿತರಿದ್ದರು.